“ಮಮತಾ ಬ್ಯಾನರ್ಜಿ ಗಾಯಗೊಂಡ ಘಟನೆ ಆಕಸ್ಮಿಕವಾಗಿತ್ತು,ದಾಳಿಯಾಗಿರಲಿಲ್ಲ”
ಪೊಲೀಸರ ಪ್ರಾಥಮಿಕ ತನಿಖಾ ವರದಿ

ಕೋಲ್ಕತಾ,ಮಾ.11: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಲು ಕಾರಣವಾದ ಘಟನೆಯು ಅವರ ಮೇಲಿನ ದಾಳಿಯಾಗಿರಲಿಲ್ಲ,ಬಹುಶಃ ಅದೊಂದು ಆಕಸ್ಮಿಕವಾಗಿತ್ತು ಎಂದು ಸ್ಥಳೀಯ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ವರದಿಯು ಅಂತಿಮವಲ್ಲ ಮತ್ತು ತನಿಖಾ ತಂಡವು ಸಾಕ್ಷಾಧಾರಗಳನ್ನು ಸಂಗ್ರಹಿಸುವ ಜೊತೆಗೆ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸುತ್ತಿದೆ. ಆದರೆ ಬ್ಯಾನರ್ಜಿಯವರ ರಕ್ಷಣಾ ವ್ಯವಸ್ಥೆಯ ಕಾರ್ಯ ನಿರ್ವಹಣೆ,ಸನ್ನದ್ಧತೆ ಮತ್ತು ಗುಂಪನ್ನು ನಿರ್ವಹಿಸಿದ ರೀತಿಯ ಬಗ್ಗೆ ಪ್ರಶ್ನೆಗಳೆದ್ದಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಶಾಂತಿಯನ್ನು ಕಾಯ್ದುಕೊಳ್ಳುವಂತೆ ಬ್ಯಾನರ್ಜಿ ಮನವಿ
ಗುರುವಾರ ವೀಡಿಯೊ ಸಂದೇಶವೊಂದನ್ನು ಬಿಡುಗಡೆಗೊಳಿಸಿರುವ ಬ್ಯಾನರ್ಜಿ,ಶಾಂತಿಯನ್ನು ಕಾಯ್ದುಕೊಳ್ಳುವಂತೆ ಮತ್ತು ಸಹನೆಯಿಂದಿರುವಂತೆ ಜನತೆಯನ್ನು ಮತ್ತು ತೃಣಮೂಲ ಕಾರ್ಯಕರ್ತರನ್ನು ಕೋರಿಕೊಂಡಿದ್ದಾರೆ.
2-3 ದಿನಗಳಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಮರಳಲಿದ್ದೇನೆ,ಆದರೆ ಕೆಲಕಾಲ ತಾನು ವ್ಹೀಲ್‌ಚೇರ್ ಬಳಸಬೇಕಾಗಬಹುದು ಎಂದಿರುವ ಬ್ಯಾನರ್ಜಿ,ತಾನು ಬುಧವಾರ ತೀವ್ರವಾಗಿ ಗಾಯಗೊಂಡಿದ್ದು ನಿಜ. ಕೈ ಮತ್ತು ಕಾಲಿನಲ್ಲಿ ನೋವಿದೆ. ಅಸ್ಥಿರಜ್ಜು ಕೂಡ ಹಾನಿಗೊಂಡಿದೆ ಎಂದು ತಿಳಿಸಿದ್ದಾರೆ.
ಟಿಎಂಸಿ ಕಾರ್ಯಕರ್ತರ ದಾಂಧಲೆ
ತನ್ಮಧ್ಯೆ ಬಿಜೆಪಿ ಬ್ಯಾನರ್ಜಿಯವರ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದರು.
ಕಾರ್ಯಕರ್ತರು ರಸ್ತೆಗಳನು ತಡೆದು ಟೈರ್‌ಗಳನ್ನು ಸುಟ್ಟಿದ್ದಲ್ಲದೆ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಭಾವೋದ್ವೇಗಗಳಿಗೆ ಗುರಿಯಾಗದಂತೆ ತೃಣಮೂಲ ಕಾಂಗ್ರೆಸ್ ಪಕ್ಷವು ಟ್ವಿಟರ್‌ನಲ್ಲಿ ಕಾರ್ಯಕರ್ತರನ್ನು ಕೋರಿಕೊಂಡಿದೆ.
ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ
ತೃಣಮೂಲ ಕಾಂಗ್ರೆಸ್‌ನ ನಿಯೋಗವೊಂದು ಬ್ಯಾನರ್ಜಿಯವರ ಮೇಲಿನ ದಾಳಿಯ ಕುರಿತು ಗುರುವಾರ ಕೋಲ್ಕತಾದಲ್ಲಿನ ಚುನಾವಣಾ ಆಯೋಗದ ಕಚೇರಿಗೆ ದೂರು ಸಲ್ಲಿಸಿದೆ. ಘಟನೆಯನ್ನು ಬ್ಯಾನರ್ಜಿಯವರ ಕೊಲ್ಲಲು ನಡೆಸಿದ ಆಳವಾದ ಪಿತೂರಿ ಎಂದು ಅದು ಬಣ್ಣಿಸಿದೆ.
ಎರಡು ದಿನಗಳ ಭೇಟಿಗಾಗಿ ನಂದಿಗ್ರಾಮಕ್ಕೆ ತೆರಳಿದ್ದ ಬ್ಯಾನರ್ಜಿ ಬುಧವಾರ ಬೆಳಿಗ್ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ತನ್ನ ನಾಮಪತ್ರ ಸಲ್ಲಿಸಿದ್ದರು. ಪ್ರಚಾರದ ಸಂದರ್ಭದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ತನ್ನನ್ನು ತಳ್ಳಿದ್ದರೆಂದು ಅವರು ಆರೋಪಿಸಿದ್ದರು. ಗಾಯಗೊಂಡಿದ್ದ ಅವರನ್ನು ಕೋಲ್ಕತಾಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿದೆ.







