ಹುಲಿ ಸೆರೆಗೆ ಆಗ್ರಹಿಸಿ ಪೊನ್ನಂಪೇಟೆ ತಾಲೂಕು ಸಂಪೂರ್ಣ ಬಂದ್: ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ ಶಾಸಕರು

ಮಡಿಕೇರಿ, ಮಾ.11: ದಕ್ಷಿಣ ಕೊಡಗಿನಲ್ಲಿ ಮೂವರು ಅಮಾಯಕರ ಸಾವಿಗೆ ಕಾರಣವಾಗಿರುವ ಹುಲಿಯನ್ನು ನಿಗ್ರಹಿಸುವಲ್ಲಿ ಸರ್ಕಾರ ವೈಫಲ್ಯ ಕಂಡಿದೆ ಎಂದು ಆರೋಪಿಸಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನೀಡಿದ ಕರೆಯಂತೆ ಗುರುವಾರ ಪೊನ್ನಂಪೇಟೆ ತಾಲೂಕಿನಲ್ಲಿ ಮಧ್ಯಾಹ್ನದವರೆಗೆ ‘ಬಂದ್’ ಸಂಪೂರ್ಣ ಯಶಸ್ವಿಯಾಯಿತು.
ಪೊನ್ನಂಪೇಟೆ ತಾಲೂಕಿನ ಪ್ರಮುಖ ವಾಣಿಜ್ಯಕ ನಗರಿ ಗೋಣಿಕೊಪ್ಪಲು ಸೇರಿದಂತೆ ನಿಟ್ಟೂರು, ಬಾಳೆಲೆ, ಶ್ರೀಮಂಗಲ, ಕುಟ್ಟ, ಟಿ.ಶೆಟ್ಟಿಗೇರಿ, ಹುದಿಕೇರಿ ವಿಭಾಗಗಳಲ್ಲಿ ಇಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟು ಸಂಪೂರ್ಣ ಬಂದ್ ನಡೆಸುವ ಮೂಲಕ ಹುಲಿ ಸೆರೆಗೆ, ಇಲ್ಲವೇ ಗುಂಡಿಕ್ಕುವುದಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲಾಯಿತು.
ಹೆಚ್ಚಿದ ಪ್ರತಿಭಟನೆಯ ಕಾವು
ಹುಲಿ ದಾಳಿಯಿಂದ ಜೀವಹಾನಿ ಸಂಭವಿಸಿದ ಬೆಳ್ಳೂರು ಗ್ರಾಮದಲ್ಲಿ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಬಟನೆ ಮುಂದುವರಿದಿದ್ದು, ಗುರುವಾರ ಅಹೋರಾತ್ರಿ ಧರಣಿಗೆ ಮುಂದಾಗಿರುವ ಗ್ರಾಮೀಣರು, ಹುಲಿ ಸೆರೆ ಹಿಡಿಯುವ ಇಲ್ಲವೇ ಗುಂಡಿಕ್ಕುವವರೆಗೆ ಪ್ರತಿಭಟನೆ ಮುಂದುವರಿಸುವ ದೃಢ ನಿರ್ಧಾರ ಕೈಗೊಂಡಿದ್ದಾರೆ.
ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 6ರಿಂದ 8 ಹುಲಿಗಳು ನಿರಂತರವಾಗಿ ಜಾನುವಾರುಗಳನ್ನು ಬೇಟೆಯಾಡುತ್ತಿದ್ದು, ಇದೀಗ ಮನುಷ್ಯರ ಸಾವಿಗೆ ಕಾರಣವಾಗುತ್ತಿದೆ. ಹೀಗಿದ್ದೂ ಕೇವಲ ಒಂದು ಹುಲಿಯನ್ನು ಹಿಡಿಯಲು ಸಾಧ್ಯವಾಗದ ಅರಣ್ಯ ಇಲಾಖೆಯ ಅಧಿಕಾರಿಗಳು ಏಕೆ ಬೇಕೆಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಹಿತ ಕಾಪಾಡುವಲ್ಲಿ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹುಲಿಯ ನಿರಂತರ ಹಾವಳಿಯಿಂದ ಪರಿಸ್ಥಿತಿ ಬಿಗಡಾಯಿಸಿದ್ದರೂ ಈ ಸರ್ಕಾರದ ಅರಣ್ಯ ಮಂತ್ರಿಗಳು ಕೇವಲ ಎಸಿ ರೂಮ್‍ನಲ್ಲಿ ಕುಳಿತು ಆಡಳಿತ ನಡೆಸುತ್ತಿದ್ದಾರೆಂದು ಟೀಕಿಸಿರುವ ಪ್ರತಿಭಟನಾಕಾರರು, ಮನುಷ್ಯರಿಗೆ ಬದುಕಲು ಬಿಡಿ ಕಾಡು ಪ್ರಾಣಿಗಳನ್ನು ಕಾಡಿಗೆ ಬಿಡಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸ್ಥಳಕ್ಕೆ ಶಾಸಕರು-ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಬೆಳ್ಳೂರಿಗೆ ತೆರಳಿ, ಪ್ರತಿಭಟನಾ ನಿರತದೊಂದಿಗೆ ಸಮಾಲೋಚನೆ ನಡೆಸುವುದರೊಂದಿಗೆ ಅವರಿಗೆ ನೈತಿಕ ಬೆಂಬಲವನ್ನು ಸೂಚಿಸಿದ್ದಾರೆ.
ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಜನ ಜಾನುವಾರುಗಳ ಸಾವಿಗೆ ಕಾರಣವಾಗಿರುವ ಹುಲಿ ಸೆರೆಗೆ ಅಧಿವೇಶನದ ಸಂದರ್ಭ ಸರ್ಕಾರವನ್ನು ಆಗ್ರಹಿಸಲಾಗಿದೆ. ಗ್ರಾಮೀಣರ ಬದುಕನ್ನು ಸಂಕಷ್ಟಕ್ಕೆ ದೂಡಿರುವ ಹುಲಿ ನಿಗ್ರಹದ ಗ್ರಾಮೀಣರ ಹೋರಾಟದೊಂದಿಗೆ ತಾವು ಕೂಡ ನಿಮ್ಮೊಂದಿಗೆ ಇರುವುದಾಗಿ ಸ್ಪಷ್ಟಪಡಿಸಿದರಲ್ಲದೆ, ಮೂರು ದಿವಸಗಳ ಕಾಲಾವಕಾಶ ಕೊಡಿ. ಸರಕಾರದ ಮುಂದೆ ಕಾಡು ಪ್ರಾಣಿಗಳ ಉಪಟಳ ತಡೆಗೆ ಶಾಶ್ವತ ಪರಿಹಾರದ ಬೇಡಿಕೆ ಇಟ್ಟಿದ್ದೇವೆ. ಅತೀ ಶೀಘ್ರದಲ್ಲೆ ಉತ್ತಮ ನಿರ್ಧಾರವನ್ನು ಸರಕಾರ ಕೈಗೊಳ್ಳಲಿದೆ ಎಂದರು. ಶಾಸಕ ಅಪ್ಪಚ್ಚುರಂಜನ್ ಅವರು ಕೂಡಾ ಭರವಸೆಯ ಮಾತುಗಳನ್ನಾಡಿದರು.
ಪ್ರತಿಭಟನಾಕಾರರನ್ನು ಬೆದರಿಸಿದ ಹೆಜ್ಜೇನು
ಹುಲಿ ದಾಳಿ ನಿಗ್ರಹಕ್ಕೆ ಆಗ್ರಹಿಸಿ ಪೊನ್ನಂಪೇಟೆ ತಾಲೂಕಿನ ಬೆಳ್ಳೂರಿನಲ್ಲಿ ಪ್ರತಿಭಟನೆಗೆ ಇಳಿದಿರುವವರ ಮೇಲೆ ಹೆಜ್ಜೇನುಗಳು ಹಠಾತ್ ದಾಳಿ ನಡೆಸಿರುವ ಘಟನೆ ಗುರುವಾರ ಸಂಜೆ ನಡೆಯಿತು.
ಬೆಳ್ಳೂರು ಗ್ರಾಮದಲ್ಲಿ ಅಹೋರಾತ್ರಿ ಪ್ರತಿಭಟನೆಗೆ ಇಳಿದಿರುವ ರೈತ ಸಂಘದ ಪ್ರಮುಖರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರ ಮೇಲೆ, ಅಲ್ಲೇ ಸಮೀಪದ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ದಾಳಿ ನಡೆಸಿದವು.
ತಕ್ಷಣ ಎಚ್ಚೆತ್ತುಕೊಂಡ ಪ್ರತಿಭಟನಾಕಾರರು ಹಾಗೂ ಪೊಲೀಸ್ ಸಿಬ್ಬಂದಿಗಳು ಹೆಜ್ಜೇನುಗಳಿಂದ ಪಾರಾಗಲು ತಮ್ಮಲ್ಲಿದ್ದ ಟವೆಲ್, ಕರವಸ್ತ್ರಗಳಿಂದ ಮುಖ ಮುಚ್ಚಿಕೊಂಡು ಹೆಜ್ಜೇನು ಗೂಡು ಇದ್ದ ಪ್ರದೇಶದಿಂದ ದೂರ ಸರಿದರು. ಅಲ್ಲದೆ ವಾಹನಗಳಲ್ಲಿ ಆಶ್ರಯ ಪಡೆದರು. ಸ್ವಲ್ಪ ಹೊತ್ತಿನ ಬಳಿಕ ಹೆಜ್ಜೇನುಗಳು ಸ್ಥಳದಿಂದ ಚದುರಿದವು. ವಿವಿಧ ಸಂಘ, ಸಂಸ್ಥೆಗಳು ಹಾಗೂ ಗ್ರಾಮಸ್ಥರು ಅಹೋರಾತ್ರಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.








