ಸ್ವಾವಲಂಬಿ ಭಾರತದಿಂದ ಸಂಪೂರ್ಣ ಜಗತ್ತಿಗೆ ಒಳಿತಾಗಲಿದೆ: ಪ್ರಧಾನಿ ಮೋದಿ
“ಭಗವದ್ಗೀತೆಯಲ್ಲಿ ತೋರಿರುವ ಮಾರ್ಗವು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ”

ಹೊಸದಿಲ್ಲಿ, ಮಾ.11: ಸ್ವಾವಲಂಬಿ ಭಾರತದಿಂದ ಜಗತ್ತಿಗೇ ಒಳಿತಾಗಲಿದೆ. ನಮಗೆ ಮಾತ್ರವಲ್ಲ, ಮಾನವಕುಲಕ್ಕೇ ಒಳಿತಾಗಬೇಕು ಎಂಬುದು ಆತ್ಮನಿರ್ಭರ (ಸ್ವಾವಲಂಬಿ) ಭಾರತ ಪರಿಕಲ್ಪನೆಯ ಮೂಲ ತಿರುಳಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಸ್ವಾಮಿ ಚಿದ್ಭಾವನಂದರ ‘ಭಗವದ್ಗೀತೆ’ ಕೃತಿಯ ಇ-ಪುಸ್ತಕ ಆವೃತ್ತಿಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆಗೊಳಿಸಿ ಮಾತನಾಡಿದ ಮೋದಿ, ಭಾರತವನ್ನು ಆತ್ಮನಿರ್ಭರ ದೇಶವನ್ನಾಗಿಸುವುದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವುದಾಗಿ ದೇಶದ 1.3 ಬಿಲಿಯನ್ ಪ್ರಜೆಗಳು ನಿರ್ಧರಿಸಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ, ಜಗತ್ತಿಗೆ ಔಷಧದ ಅಗತ್ಯಬಿದ್ದಾಗ, ಭಾರತ ತನ್ನಿಂದಾದಷ್ಟು ಮಟ್ಟಿಗೆ ಔಷಧ ಪೂರೈಸಿದೆ. ಕೊರೋನ ಸಾಂಕ್ರಾಮಿಕ ವಿಶ್ವವನ್ನೇ ಕಂಗೆಡಿಸಿದ್ದಾಗ ನಮ್ಮ ವಿಜ್ಞಾನಿಗಳು ತ್ವರಿತವಾಗಿ ಲಸಿಕೆ ಸಿದ್ಧಪಡಿಸಿದ್ದಾರೆ. ಈಗ ದೇಶದಲ್ಲಿ ತಯಾರಾದ ಲಸಿಕೆಗಳು ವಿಶ್ವದೆಲ್ಲೆಡೆ ಪೂರೈಕೆಯಾಗುತ್ತಿದೆ ಎಂಬುದನ್ನು ವಿನೀತನಾಗಿ ಹೇಳಲು ಬಯಸುತ್ತೇನೆ. ಕೊರೋನ ಸಾಂಕ್ರಾಮಿಕದ ವಿರುದ್ಧ ವಿಶ್ವದೆಲ್ಲೆಡೆ ಕಠಿಣ ಹೋರಾಟ ಮುಂದುವರಿದಿದೆ. ಈ ಸೋಂಕಿನ ಕಾರಣದಿಂದಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳೂ ವ್ಯಾಪಕವಾಗಿವೆ. ಇಂತಹ ಸಮಯದಲ್ಲಿ ಭಗವದ್ಗೀತೆಯಲ್ಲಿ ತೋರಿರುವ ಮಾರ್ಗವು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಮಾನವ ಕುಲಕ್ಕೆ ಎದುರಾಗುವ ಸವಾಲುಗಳನ್ನು ಮೆಟ್ಟಿನಿಂತು ಯಶಸ್ವಿಯಾಗುವ ಮಾರ್ಗ ಮತ್ತು ಶಕ್ತಿಯನ್ನು ಗೀತೆ ನೀಡುತ್ತದೆ. ಇಂತಹ ಹಲವು ಉದಾಹರಣೆಗಳು ನಮ್ಮೆದುರಿಗಿವೆ. ಆಳ, ವೈವಿಧ್ಯತೆ ಮತ್ತು ನಮ್ಯತೆ ಭಗವದ್ಗೀತೆಯ ವೈಶಿಷ್ಟವಾಗಿದೆ ಎಂದು ಮೋದಿ ಹೇಳಿದರು.
ಇ-ಬುಕ್‌ಗಳು ಇಂದು ಜನಪ್ರಿಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇ-ಬುಕ್ ವೇದಿಕೆಯ ಮೂಲಕ ಭಗವದ್ಗೀತೆಯ ಚಿಂತನೆಗಳನ್ನು ಯುವಜನರಿಗೆ ತಲುಪಿಸುವ ಪ್ರಯತ್ನ ಶ್ಲಾಘನೀಯ ಎಂದವರು ಹೇಳಿದ್ದಾರೆ.







