ಬ್ರಿಟನ್ ಸಂಸತ್ತಿನಲ್ಲಿ ಕೃಷಿ ಕಾಯ್ದೆ ಚರ್ಚೆ: ಸಮರ್ಥಿಸಿಕೊಂಡ ಶಶಿ ತರೂರ್
“ನಾವು ಕೂಡ ಇಸ್ರೇಲ್-ಫೆಲೆಸ್ತೀನ್ ಸಮಸ್ಯೆಯ ಕುರಿತು ಚರ್ಚಿಸುತ್ತೇವೆ”

Photo: twitter.com/ShashiTharoor
ಹೊಸದಿಲ್ಲಿ, ಮಾ.11: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ ನಡೆಸಿರುವುದನ್ನು ಸಮರ್ಥಿಸಿರುವ ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಸಹಜ ಪ್ರಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತೊಂದು ದೇಶದ ಆಂತರಿಕ ವಿಷಯವನ್ನು ಚರ್ಚಿಸುವುದು ಸಹಜ ಪ್ರಕ್ರಿಯೆಯಾಗಿದೆ. ಭಾರತದ ಸಂಸತ್ತಿನಲ್ಲಿ ನಾವು ಬೇರೆ ದೇಶದ, ಉದಾಹರಣೆಗೆ ಫೆಲೆಸ್ತೀನ್ನ ಸಮಸ್ಯೆಯನ್ನು ಚರ್ಚಿಸುತ್ತೇವೆ. ಬ್ರಿಟನ್ ಸಂಸತ್ತಿಗೂ ಈ ಅಧಿಕಾರವಿದೆ. ಆದರೆ, ಬ್ರಿಟನ್ ಸಂಸತ್ತಿನಲ್ಲಿ ನಡೆದ ಚರ್ಚೆಯ ವಿಷಯದಲ್ಲಿ ಕೇಂದ್ರ ಸರಕಾರದ ನಿಲುವನ್ನು ತಾನು ಖಂಡಿಸುವುದಿಲ್ಲ. ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿರುವುದನ್ನು ಟೀಕಿಸಲಾಗದು. ಸರಕಾರ ತನ್ನ ಕರ್ತವ್ಯ ನಿಭಾಯಿಸಿದೆ ಎಂದು ತರೂರ್ ಹೇಳಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಸೋಮವಾರ ಬ್ರಿಟನ್ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭ ಕನ್ಸರ್ವೇಟಿವ್, ಲೇಬರ್, ಲಿಬರಲ್ ಡೆಮೊಕ್ರಾಟಿಕ್ ಮತ್ತು ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ಸಂಸದರು, ಭಾರತದಲ್ಲಿ ಮಾಧ್ಯಮ ಸ್ವಾತಂತ್ರ ಹಾಗೂ ಪ್ರತಿಭಟನೆಯನ್ನು ನಿರ್ವಹಿಸುತ್ತಿರುವ ರೀತಿ ತೀವ್ರ ಕಳವಳಕಾರಿಯಾಗಿದೆ ಎಂದಿದ್ದರು. ಈ ಹೇಳಿಕೆಯನ್ನು ವಿರೋಧಿಸಿದ್ದ ಭಾರತ, ಬ್ರಿಟಿಷ್ ಹೈಕಮಿಷನರ್ಗೆ ಸಮನ್ಸ್ ನೀಡಿ ಆಕ್ಷೇಪ ಸೂಚಿಸಿದೆ.







