ಪಕ್ಷಗಳನ್ನು ಬದಲಿಸಿದ ಶೇ.44ರಷ್ಟು ಶಾಸಕರು ಬಿಜೆಪಿಗೆ ಸೇರ್ಪಡೆ: ಎಡಿಆರ್ ವರದಿ

ಹೊಸದಿಲ್ಲಿ,ಮಾ.11: 2016-2020ರ ನಡುವಿನ ಅವಧಿಯಲ್ಲಿ ಪಕ್ಷಗಳನ್ನು ಬದಲಿಸಿದ್ದ ಮತ್ತು ಚುನಾವಣೆಗಳಲ್ಲಿ ಮರುಸ್ಪರ್ಧಿಸಿದ್ದ ಶಾಸಕರ ವಿಶ್ಲೇಷಣೆಯು,ಇದರಿಂದ ಬಿಜೆಪಿಯು ಹೆಚ್ಚಿನ ಲಾಭವನ್ನು ಪಡೆದುಕೊಂಡ ಪಕ್ಷವಾಗಿದೆ ಮತ್ತು ಕಾಂಗ್ರೆಸ್ ಹೆಚ್ಚಿನ ಶಾಸಕರನ್ನು ಕಳೆದುಕೊಂಡಿರುವ ಪಕ್ಷವಾಗಿದೆ ಎನ್ನುವುದನ್ನು ತೋರಿಸಿದೆ.
ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಗುರುವಾರ ಬಿಡುಗಡೆಗೊಳಿಸಿರುವ ವರದಿಯು ಕಳೆದ ಐದು ವರ್ಷಗಳಲ್ಲಿ ಪಕ್ಷಗಳನ್ನು ಬದಲಿಸಿ ಚುನಾವಣೆಗಳಲ್ಲಿ ಮರುಸ್ಪರ್ಧಿಸಿದ್ದ 443 ಶಾಸಕರ ಚುನಾವಣಾ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದೆ. ವಿವಿಧ ರಾಜ್ಯಗಳಲ್ಲಿ ಪಕ್ಷವನ್ನು ತೊರೆದು ಬೇರೆ ಪಕ್ಷಗಳಿಗೆ ಸೇರಿದ 405 ಶಾಸಕರಲ್ಲಿ ಶೇ.42ರಷ್ಟು ಕಾಂಗ್ರೆಸ್‌ನಿಂದ ಹೊರಬಿದ್ದವರಾಗಿದ್ದು,ಶೇ.4.4 ಶಾಸಕರೊಂದಿಗೆ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಪಕ್ಷವನ್ನು ತೊರೆದು ಚುನಾವಣೆಗೆ ಮರುಸ್ಪರ್ಧಿಸಿದ್ದ ಶೇ.44.9 ಶಾಸಕರ ಆಯ್ಕೆಯು ಬಿಜೆಪಿಯಾಗಿದ್ದು,ನಂತರದ ಸ್ಥಾನದಲ್ಲಿ ಕಾಂಗ್ರೆಸ್ (ಶೇ.9.4) ಇದೆ. ಇತ್ತೀಚಿನ ತಿಂಗಳುಗಳಲ್ಲಿ ಮಧ್ಯಪ್ರದೇಶ,ಮಣಿಪುರ,ಅರುಣಾಚಲ ಪ್ರದೇಶ ಮತ್ತು ಕರ್ನಾಟಕಗಳಲ್ಲಿ ಸರಕಾರಗಳು ಉರುಳಲು ಶಾಸಕರ ಪಕ್ಷಾಂತರ ಕಾರಣವಾಗಿತ್ತು ಎಂದು ವರದಿಯು ಬೆಟ್ಟುಮಾಡಿದೆ.
ಪಕ್ಷಗಳನ್ನು ಬದಲಿಸಿರುವ 12 ಲೋಕಸಭಾ ಸದಸ್ಯರ ಪೈಕಿ ಐವರು ಬಿಜೆಪಿಯವರಾಗಿದ್ದರು. ರಾಜ್ಯಸಭೆಯನ್ನು ತೊರೆದ 17 ಸದಸ್ಯರಲ್ಲಿ ಏಳು ಜನರು ಕಾಂಗ್ರೆಸ್‌ನವರಾಗಿದ್ದರು. ಮರುಸ್ಪರ್ಧಿಸಿದ್ದ ಶಾಸಕರು ಮತ್ತು ಸಂಸದರ ಆಸ್ತಿಗಳಲ್ಲಿ ಸರಾಸರಿ ಶೇ.39ರಷ್ಟು ಏರಿಕೆಯಾಗಿತ್ತು ಎಂದು ವರದಿಯು ತಿಳಿಸಿದೆ.
ಹಣ ಮತ್ತು ತೋಳ್ಬಲದ ಬಳಕೆ,ಪಕ್ಷಗಳ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಕಾನೂನುಗಳು ಇಲ್ಲದಿರುವುದು ಮತ್ತು ಪ್ರಾಮಾಣಿಕ ನಾಯಕರ ಕೊರತೆ ಇತ್ಯಾದಿಗಳು ಶಾಸಕರ ಪಕ್ಷಾಂತರಗಳಿಗೆ ಕಾರಣವಾಗಿರುವಂತೆ ಕಂಡುಬರುತ್ತಿದೆ ಎಂದು ಎಡಿಆರ್ ತನ್ನ ವರದಿಯಲ್ಲಿ ಹೇಳಿದೆ







