ಹಾಂಕಾಂಗ್: ಇನ್ನು ‘ದೇಶಭಕ್ತ’ರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ
ಆಮೂಲಾಗ್ರ ಚುನಾವಣಾ ಬದಲಾವಣೆಗೆ ಚೀನಾ ಸಂಸತ್ತು ಅನುಮೋದನೆ

ಬೀಜಿಂಗ್ (ಚೀನಾ), ಮಾ. 11: ಹಾಂಕಾಂಗ್‌ನ ಚುನಾವಣಾ ವ್ಯವಸ್ಥೆಗೆ ತರಲಾಗಿರುವ ಆಮೂಲಾಗ್ರ ಬದಲಾವಣೆಗಳಿಗೆ ಚೀನದ ರಬ್ಬರ್ ಸ್ಟಾಂಪ್ ಸಂಸತ್ತು ಗುರುವಾರ ಅನುಮೋದನೆ ನೀಡಿದೆ. ಹಾಂಕಾಂಗ್‌ನಲ್ಲಿ ಬೃಹತ್ ಪ್ರಜಾಪ್ರಭುತ್ವ ಪರ ಧರಣಿಗಳು ನಡೆದ ಬಳಿಕ, ‘ದೇಶಭಕ್ತ’ರು ಮಾತ್ರ ಈ ನಗರದ ಆಡಳಿತ ನಡೆಸಬೇಕು ಎನ್ನುವ ನಿರ್ಧರಕ್ಕೆ ಚೀನಾ ಬಂದಿದೆ.
ಹಾಂಕಾಂಗ್‌ನ ನೂತನ ಚುನಾವಣಾ ವ್ಯವಸ್ಥೆಯಲ್ಲಿ ಅಭ್ಯರ್ಥಿಗಳಿಗೆ ತಡೆಯೊಡ್ಡುವ ಅಧಿಕಾರಗಳನ್ನು ನೀಡಲಾಗಿದೆ.
2019ರಲ್ಲಿ ಜಾಗತಿಕ ಆರ್ಥಿಕ ಕೇಂದ್ರ ಹಾಂಕಾಂಗ್‌ನಲ್ಲಿ ಬೃಹತ್ ಪ್ರಜಾಪ್ರಭುತ್ವ ಪರ ಚಳವಳಿಗಳು ನಡೆದ ಬಳಿಕ, ಅಲ್ಲಿರುವ ಸೀಮಿತ ಪ್ರಜಾಪ್ರಭುತ್ವ ಪರ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಚೀನಾ ಮುಂದಾಗಿದೆ.
ಗುರುವಾರ ಚೀನಾದ 2,896 ಸದಸ್ಯ ಬಲದ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್‌ನಲ್ಲಿ ನಡೆದ ಮತದಾನದಲ್ಲಿ ಒಬ್ಬ ಸದಸ್ಯ ಮಾತ್ರ ಗೈರುಹಾಜರಾಗಿದ್ದರು.
ಈ ಬದಲಾವಣೆಗಳು ಹಾಂಕಾಂಗ್‌ನ ಪ್ರಜಾಪ್ರಭುತ್ವ ಚಳವಳಿಯ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ನೂತನ ಕಾನೂನು ಹಾಂಕಾಂಗ್‌ನ ಆಡಳಿತವನ್ನು ‘‘ದೇಶಭಕ್ತ ಹಾಗೂ ಹಾಂಕಾಂಗನ್ನು ಪ್ರೀತಿಸುವ ಶಕ್ತಿಗಳ ಕೈಗಳಲ್ಲಿ ಸುಭದ್ರವಾಗಿ ಇಡುವ’’ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ.







