ಸಿಡಿ ಪ್ರಕರಣ: ಶೀಘ್ರದಲ್ಲಿಯೇ ಎಫ್‍ಐಆರ್ ದಾಖಲು ಎಂದ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ.11: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಪ್ರಾಥಮಿಕ ಮಾಹಿತಿ ಸಂಗ್ರಹ ಬೆನ್ನಲ್ಲೇ ಎಫ್‍ಐಆರ್ ದಾಖಲಿಸಿ ಸಿಟ್(ಎಸ್‍ಐಟಿ) ತನಿಖೆ ಕೈಗೆತ್ತಿಗೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‍ಐಆರ್ ದಾಖಲಿಸುವವರೆಗೂ ಯಾರ ಮೇಲೂ ಯಾವ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಸಿಡಿ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಸಿಟ್‍ಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂಬ ವಿಶ್ವಾಸ ಇದೆ ಎಂದರು.
ಇಂತಿಷ್ಟೇ ಸಮಯದಲ್ಲಿ ವರದಿ ನೀಡಬೇಕೆಂದು ಸಿಟ್‍ಗೆ ಸೂಚನೆ ಕೊಟ್ಟಿಲ್ಲ. ಅವರು ಮುಕ್ತವಾಗಿ ತನಿಖೆ ನಡೆಸಿ ಸರಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ ಎಂದ ಅವರು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಸಿಟ್ ಮುಖ್ಯಸ್ಥರಿಗೆ ನಾನೇ ಸೂಚನೆ ಕೊಟ್ಟಿದ್ದೇನೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂಬ ಕಾರಣಕ್ಕಾಗಿ ನಾವು ಇಂತಹ ದಿಟ್ಟ ಕ್ರಮ ತೆಗೆದುಕೊಂಡಿದ್ದೇವೆ. ಇದರಲ್ಲಿ ಯಾರನ್ನೋ ಗುರಿಯಾಗಿಟ್ಟುಕೊಂಡು ಅಥವಾ ಇನ್ನಾರನ್ನೊ ರಕ್ಷಣೆ ಮಾಡಬೇಕೆಂಬ ಕಾರಣಕ್ಕಾಗಿ ತನಿಖೆಗೆ ಆದೇಶ ಮಾಡಿಲ್ಲ ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದರು.
ಸಿಡಿಯನ್ನು ಯಾರು ಮಾಡಿದರು, ಇದರ ಹಿಂದಿನ ಉದ್ದೇಶವಾದರೂ ಏನು, ಯಾವ ಕಾರಣಕ್ಕಾಗಿ ಇದು ಬಹಿರಂಗಗೊಂಡಿತು ಎಂಬುದು ಸೇರಿದಂತೆ ಎಲ್ಲ ಮಾಹಿತಿಗಳೂ ಹೊರಬರಬೇಕು. ಅದಕ್ಕಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಅವರು ಹೇಳಿದರು.
ಇನ್ನು ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶರ್ಟ್, ಪ್ಯಾಂಟ್ ತೆಗೆದಿರುವ ಕುರಿತು ತನಿಖೆಯಲ್ಲಿ ಗೊತ್ತಾಗುತ್ತದೆ. ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಯಲಿದೆ ಎಂದು ತಿಳಿಸಿದರು.







