‘ಯತ್ನಾಳ್ ಹೆಗಲ ಮೇಲೆ ಬಂದೂಕು, ಯಡಿಯೂರಪ್ಪನವರತ್ತ ಗುರಿ’
ಇದು ಬಿಎಸ್‍ವೈ ಮುಕ್ತ ಬಿಜೆಪಿ ಸಮರದ ಚಿತ್ರಣ: ಬಿ.ಆರ್.ನಾಯ್ಡು
ಬೆಂಗಳೂರು, ಮಾ.11: ಬಿ.ಎಸ್.ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡಲು ಬಿಜೆಪಿಯೊಳಗೆ ದೊಡ್ಡ ಸಮರವೇ ನಡೆಯುತ್ತಿದೆ. ಇದರ ಮುಖವಾಣಿಯಾಗಿ ನಿಂತಿರೋದು ಶಾಸಕ ಬಸನಗೌಡ ಯತ್ನಾಳ್ ಅವರು. ಮುಖ್ಯಮಂತ್ರಿ ಮತ್ತವರ ಕುಟುಂಬ ಸದಸ್ಯರು ಹಾಗೂ ಸರಕಾರದ ವಿರುದ್ಧ ಹಾದಿಬೀದಿಯಲ್ಲಿ ಹೀನಾಮಾನ ಬಯ್ಯುತ್ತಿದ್ದಾರೆ. ಭ್ರಷ್ಟಾಚಾರ, ಸಿಡಿಯಂತಹ ಗಂಭೀರ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆಯೂ ಇಲ್ಲ, ಯತ್ನಾಳ್ ಅವರ ವಿರುದ್ಧ ಕ್ರಮವೂ ಇಲ್ಲ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಬಿ.ಆರ್.ನಾಯ್ಡು ಟೀಕಿಸಿದ್ದಾರೆ.
ಮುಖಸ್ತುತಿಗೆ ಬಸನಗೌಡ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಕೊಡಲಾಗಿದೆ ಅಷ್ಟೇ. ಅದಕ್ಕೆ ಕಿಂಚಿತ್ತೂ ಪರಿಣಾಮವಿಲ್ಲ ಎಂಬುದನ್ನು ರಾಜ್ಯದ ಜನ ಕಣ್ಣಾರೆ ನೋಡುತ್ತಿದ್ದಾರೆ. ಇದು ಸರಕಾರಕಷ್ಟೇ ಅಲ್ಲ, ಇಡೀ ಪಕ್ಷಕ್ಕೆ ಮುಖಭಂಗವಾಗುತ್ತಿದ್ದರೂ ಬಸನಗೌಡ ಅವರ ಬಾಯಿಗೆ ಬೀಗ ಹಾಕಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಬಿಜೆಪಿಯಲ್ಲಿ ಒಳಗೊಳಗೆ ಯಡಿಯೂರಪ್ಪ ಅವರ ವಿರುದ್ಧ ಸಮರ ಸಾರಿರುವುದನ್ನು ಸ್ಪಷ್ಟಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಸ್ಟ್ಯಾಂಡಪ್ ಕಮೀಡಿಯನ್ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರಾಗಿರುವುದು ರಾಜ್ಯ ಬಿಜೆಪಿಯ ದುಸ್ಥಿತಿಗೆ ಕಾರಣವಾಗಿದೆ ಎಂಬುದು ಭಕ್ತ ಸಮೂಹದಲ್ಲಿ ಆಂತರಿಕವಾಗಿ ನಡೆಯುತ್ತಿರೋ ಚರ್ಚೆ. ಸದ್ಯ ಬಿಜೆಪಿ ಒಡೆದ ಗಾಜಿನ ಮನೆಯಂತಾಗಿದ್ದು, ಒಂದುಗೂಡುವುದು ಅಸಾಧ್ಯ ಎನ್ನುವ ಸ್ಥಿತಿ ತಲುಪಿದೆ. ಇನ್ನು ಬೇರೆ ರಾಜ್ಯಗಳ ಚುನಾವಣೆಯಲ್ಲಿ ಕಳೆದುಹೋಗಿರುವ ನರೇಂದ್ರ ಮೋದಿ ಅವರಾಗಲಿ, ಅಮಿತ್ ಶಾ ಅವರಾಗಲಿ, ಜೆ.ಪಿ.ನಡ್ಡಾ ಅವರಾಗಲಿ, ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುವವರೆಗೂ ನಮ್ಮ ರಾಜ್ಯದ ಕಡೆ ಮೆಳ್ಳಗಣ್ಣಿನಲ್ಲೂ ನೋಡುವ ಲಕ್ಷಣಗಳಿಲ್ಲ ಎಂದು ಬಿ.ಆರ್.ನಾಯ್ಡು ವ್ಯಂಗ್ಯವಾಡಿದ್ದಾರೆ.
ಸಿಡಿ ವ್ಯವಹಾರ ಹಾಗೂ ಬಿ.ಎಸ್.ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡುವಲ್ಲಿ ಸಂಪೂರ್ಣವಾಗಿ ತಲ್ಲೀನವಾಗಿರುವ ಬಿಜೆಪಿ, ರಾಜ್ಯದ ಜನರನ್ನು ಸಂಪೂರ್ಣವಾಗಿ ಮರೆತಿದ್ದು, ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತಾಗಿದೆ ರಾಜ್ಯದ ಸ್ಥಿತಿ. ಬಿಜೆಪಿಯ ಬಂಡ ಬಾಳು, ನವರಂಗಿ ಆಟ ನೋಡುತ್ತಿರುವ ಮತದಾರರು ಇವರಿಗೆ ಮತ ಹಾಕಿ ತಪ್ಪು ಮಾಡಿದೆವು ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.







