ಭಾರತ: ಮತ್ತೆ ಹೆಚ್ಚುತ್ತಿರುವ ಕೊರೋನ ಸೋಂಕು; 22,854 ಹೊಸ ಪ್ರಕರಣ ದಾಖಲು

ಹೊಸದಿಲ್ಲಿ, ಮಾ.11: ಭಾರತದಲ್ಲಿ ಗುರುವಾರ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ಕೊರೋನ ಸೋಂಕಿನ 22,854 ಹೊಸ ಪ್ರಕರಣ ದಾಖಲಾಗಿದ್ದು ಸುಮಾರು 2 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ದೈನಂದಿನ ಹೊಸ ಸೋಂಕು ಪ್ರಕರಣ 22,000ದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,12,85,561ಕ್ಕೇರಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 1,89,226 ಆಗಿದೆ. ಇದು ಒಟ್ಟು ಪ್ರಕರಣಗಳ 1.68% ಪ್ರಮಾಣವಾಗಿದ್ದು ಚೇತರಿಕೆ ಪ್ರಮಾಣ 96.92%ಕ್ಕೆ ಏರಿದೆ. ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,58,189 ಆಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಹೊಸ ಸೋಂಕು ಪ್ರಕರಣಗಳ 85.91% ಪ್ರಕರಣ ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು- ಈ 6 ರಾಜ್ಯಗಳಲ್ಲೇ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ (13,659) ಪ್ರಕರಣ ದಾಖಲಾಗಿದ್ದರೆ ಕೇರಳ (2,475) ಮತ್ತು ಪಂಜಾಬ್(1,393) ಆ ಬಳಿಕದ ಸ್ಥಾನದಲ್ಲಿವೆ.
ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯ ತಾಯಿ ಹೀರಾಬೆನ್ ಮೋದಿ ಗುರುವಾರ ಕೋವಿಡ್ ಲಸಿಕೆಯ ಪ್ರಥಮ ಡೋಸ್ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ತಾಯಿ ಕೊರೋನ ಲಸಿಕೆಯ ಪ್ರಥಮ ಡೋಸ್ ಪಡೆದಿದ್ದಾರೆ ಎಂದು ಹೇಳಲು ಸಂತಸವಾಗುತ್ತಿದೆ. ಅರ್ಹ ಪ್ರತಿಯೊಬ್ಬರೂ ಲಸಿಕೆ ಸ್ವೀಕರಿಸಬೇಕು ಎಂದು ಮೋದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.





