ರಾಜ್ಯದಲ್ಲಿ ಅಸಹ್ಯಕರ ವಾತಾವರಣ ನಿರ್ಮಾಣವಾಗಿದೆ: ಈಶ್ವರ್ ಖಂಡ್ರೆ

ಯಾದಗಿರಿ, ಮಾ.11: ಸಿಡಿ ಪ್ರಕರಣವು ನಾಗರಿಕ ಸಮಾಜವೆ ತಲೆತಗ್ಗಿಸುವಂತೆ ಮಾಡಿದೆ. ನಮ್ಮ ರಾಜ್ಯದಲ್ಲಿ ಈ ಪ್ರಕರಣ ಹೊರ ಬಂದ ಬಳಿಕ ಒಂದು ರೀತಿಯಲ್ಲಿ ಅಸಹ್ಯಕರ ವಾತಾವರಣ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇನ್ನೂ 19-20 ಸಿಡಿಗಳಿವೆ ಎನ್ನುತ್ತಿದ್ದಾರೆ. ಇವೆಲ್ಲವುಗಳ ಬಗ್ಗೆ ಸತ್ಯಾಸತ್ಯತೆ ಹೊರ ಬರಲು ಸಮಗ್ರವಾದ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಪಕ್ಷದ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದನ್ನು ಸ್ವಾಗತಿಸುತ್ತೇನೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುವುದರಿಂದ, ಹೆಚ್ಚಿನ ಶಕ್ತಿ ಬರುತ್ತದೆ. ಇತರ ಪಕ್ಷಗಳ ಹಲವಾರು ಮಂದಿ ಮುಖಂಡರು ಇವತ್ತು ಕಾಂಗ್ರೆಸ್ ಪಕ್ಷ ಸೇರಲು ಆಸಕ್ತರಾಗಿದ್ದಾರೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾರನ್ನೂ ಏಕಾಏಕಿ ಸೇರಿಸಿಕೊಳ್ಳುವುದಿಲ್ಲ. ಅದಕ್ಕಾಗಿ ಪಕ್ಷದಲ್ಲಿ ಒಂದು ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಲಾಗಿದ್ದು, ಆ ಸಮಿತಿಯು ಪರಿಶೀಲಿಸಿ ಒಪ್ಪಿಗೆ ನೀಡಿದ ಬಳಿಕವಷ್ಟೇ ನಾವು ಅನ್ಯ ಪಕ್ಷದ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಕೆಲವು ಕಾರಣಗಳಿಂದ ಪಕ್ಷ ಬಿಟ್ಟು ಹೋಗಿರುವವರು ಪುನಃ ಹಿಂದಿರುಗುವುದಾದರೆ ಸ್ವಾಗತಿಸುತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಅನೈತಿಕ ಸರಕಾರ ಆಡಳಿತ ನಡೆಸುತ್ತಿದೆ. ಅಭಿವೃದ್ಧಿಯನ್ನು ಮರೆತು ಕೇವಲ ವರ್ಗಾವಣೆ ದಂಧೆಯಲ್ಲಿ ತಲ್ಲೀನವಾಗಿದೆ. ಮುಂಬರುವ ಉಪ ಚುನಾವಣೆಗಳಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ, ಈ ವಚನ ಭ್ರಷ್ಟ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಈಶ್ವರ್ ಖಂಡ್ರೆ, ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.







