ಹರ್ಯಾಣ:ಅವಿಶ್ವಾಸ ಮತವನ್ನು ಗೆದ್ದ ಬೆನ್ನಿಗೇ ರೈತರ ಆಕ್ರೋಶಕ್ಕೆ ಗುರಿಯಾದ ಆಡಳಿತ ಪಕ್ಷದ ಶಾಸಕರು

ಸಾಂದರ್ಭಿಕ ಚಿತ್ರ
ಚಂಡಿಗಡ,ಮಾ.10: ಹರ್ಯಾಣದ ಮನೋಹರಲಾಲ್ ಖಟ್ಟರ್ ನೇತೃತ್ವದ ಬಿಜೆಪಿ-ಜೆಜೆಪಿ ಸರಕಾರವು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಪರಾಭವಗೊಳಿಸಿದ ಬೆನ್ನಲ್ಲೇ ಆಡಳಿತ ಪಕ್ಷದ ಶಾಸಕರು ರೈತರ ಆಕ್ರೋಶವನ್ನು ಎದುರಿಸುವಂತಾಗಿದೆ.
ಗುರುವಾರ ಅಂಬಾಲಾದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಅಸೀಮ ಗೋಯೆಲ್ ಅವರ ನಿವಾಸದ ಮುಂದೆ ರೈತರು ಭಾರೀ ಪ್ರತಿಭಟನೆಯನ್ನು ನಡೆಸಿದರು. ಅತ್ತ ಸಿರ್ಸಾದಲ್ಲಿ ಸರಕಾರವನ್ನು ಬೆಂಬಲಿಸಿದ್ದ ಪಕ್ಷೇತರ ಶಾಸಕ ಹಾಗೂ ಹರ್ಯಾಣ ಲೋಕಹಿತ ಪಾರ್ಟಿಯ ನೇತಾರ ಗೋಪಾಲ್ ಗೋಯಲ್ ಕಾಂಡ್ಲಾ ಅವರ ನಿವಾಸದ ಹೊರಗೂ ರೈತರು ಪ್ರತಿಭಟನೆ ನಡೆಸಿದ್ದಾರೆ.
ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ರಾಜ್ಯಸರಕಾರದ ಪರ ಮತವನ್ನು ಚಲಾಯಿಸಿದ್ದ ಶಾಸಕರ ವಿರುದ್ಧ ಸಾಮಾಜಿಕ ಬಹಿಷ್ಕಾರಕ್ಕೆ ಬುಧವಾರ ಕರೆ ನೀಡಿತ್ತು. ಬುಧವಾರ ರಾಜ್ಯ ವಿಧಾನಸಭೆಯಲ್ಲಿ ತನ್ನ ಭಾಷಣದ ವೇಳೆ ಗೋಯಲ್ ಜ.26ರ ಕೆಂಪುಕೋಟೆ ಹಿಂಸಾಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಬೆಂಬಲಿತ ದೇಶವಿರೋಧಿ ಶಕ್ತಿಗಳು ಇದಕ್ಕೆ ಕಾರಣವಾಗಿದ್ದವು ಎಂದು ಹೇಳಿದ್ದರು. ಗೋಯಲ್ ರೈತರನ್ನು ದೇಶವಿರೋಧಿಗಳೆಂದು ಕರೆದಿದ್ದಾರೆಂದು ಆರೋಪಿಸಿ ಕಾಂಗ್ರಸ್ ಸದನದಲ್ಲಿ ಕೋಲಾಹಲವನ್ನು ಸೃಷ್ಟಿಸಿತ್ತು.
ತಾನು ದಿಲ್ಲಿಯ ಜೆಎನ್ಯುದಲ್ಲಿ ಕೆಲವರು ಮಾಡಿದ್ದ ವಿವಾದಾಸ್ಪದ ಘೋಷಣೆಗಳನ್ನು ಪ್ರಸ್ತಾಪಿಸಿದ್ದೆ,ರೈತರೆಂದೂ ತನ್ನ ಗುರಿಯಾಗಿರಲಿಲ್ಲ ಎಂದು ಗೋಯಲ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ.
ತನ್ಮಧ್ಯೆ ಜೆಜೆಪಿ ಮತ್ತು ಇತರ ಪಕ್ಷೇತರ ಶಾಸಕರು ಸರಕಾರಕ್ಕೆ ಬೆಂಬಲ ನೀಡಿದ್ದು ರೈತರಿಗೆ ಮತ್ತು ಅವರ ಹೋರಾಟಕ್ಕೆ ಮಾಡಿರುವ ಮಹಾನ್ ವಂಚನೆಯಾಗಿದೆ ಎಂದು ಎಸ್ಕೆಎಂ ನಾಯಕರು ಆರೋಪಿಸಿದ್ದಾರೆ.







