ಮೈಸೂರು: ಉದ್ಯಾನವನದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಶಿಕ್ಷಕಿಗೆ ಸನ್ಮಾನ

ಮೈಸೂರು,ಮಾ.11: ಮಾನವೀಯತೆ ಹಾಗೂ ಸಮಯಪ್ರಜ್ಞೆ ತೋರಿದ ದೈಹಿಕ ಶಿಕ್ಷಕಿ ಶೋಭಾಗೆ ಮೈಸೂರು ಯುವ ಬಳಗದ ವತಿಯಿಂದ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು.
ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಮಾನವೀಯತೆ ಹಾಗೂ ಸಮಯಪ್ರಜ್ಞೆ ತೋರಿದ ದೈಹಿಕ ಶಿಕ್ಷಕಿ ಶೋಭಾ ಅವರನ್ನು ಮೈಸೂರು ಯುವ ಬಳಗದ ವತಿಯಿಂದ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗೆ ಶ್ರಮಿಸಿದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಭಾವಚಿತ್ರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ದೈಹಿಕ ಶಿಕ್ಷಕಿ ಶೋಭಾ ಅವರನ್ನು ಅಭಿನಂದಿಸಿದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಅವರು ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ಒಬ್ಬಳು ಗರ್ಭಿಣಿ ಮಹಿಳೆ ಅಸಹಾಯಕತೆಯಾಗಿ ಹೇಳಿಕೊಳ್ಳಲಾಗದ ಸಂದರ್ಭದಲ್ಲಿದ್ದಾಗ ತಾಯ್ತನದ ನೋವು ಅರಿತ ದೈಹಿಕ ಶಿಕ್ಷಕಿ ಶೋಭಾ ಅವರು ಕೂಡಲೇ ಆಯುರ್ವೇದ ಪಂಡಿತ ಅಹೋರಾತ್ರ ಅವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿ ಮಗು ಜನಿಸಲು ನಡೆಸುವ ವಿಧಾನ ಪ್ರಕ್ರಿಯೆ ಪಡೆದು ಇಬ್ಬರ ಜೀವವನ್ನು ಉಳಿಸಿದ್ದಾರೆ. ಇವರ ಸೇವಾ ಮನೋಭಾವ, ಧೈರ್ಯ ಎಲ್ಲರಿಗೂ ಮಾದರಿಯಾಗಿದೆ. ಸ್ವತಂತ್ರ ಪೂರ್ವ ಬ್ರಿಟಿಷರ ವಿರುದ್ಧ ಕೊಡಗಿನವರು ಧೈರ್ಯವಂತರು, ಹೋರಾಟಗಾರರು ಎಂದು ಇತಿಹಾಸದಲ್ಲಿ ತಿಳಿದುಕೊಂಡಿದ್ದ ನಮಗೆ ತಾಂತ್ರಿಕ ಯುಗದಲ್ಲಿ ಅದನ್ನು ದೈಹಿಕ ಶಿಕ್ಷಕಿ ಶೋಭಾ ಅವರು ತೋರ್ಪಡಿಸಿದ್ದಾರೆ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ನವೀನ್ ಕುಮಾರ್ ಮಾತನಾಡಿ ಶೋಭಾ ಅವರ ಮಾದರಿಯಾಗಿಯೇ ಎಲ್ಲಾ ಹೆಣ್ಣು ಮಕ್ಕಳು ಧೈರ್ಯ ಮತ್ತು ಸಮಯಪ್ರಜ್ಞೆ ಮತ್ತು ದೃಢ ಸಂಕಲ್ಪ ಬೆಳೆಸಿಕೊಳ್ಳಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ವ್ಯಾಪಾರಿ ಪ್ರಕೋಷ್ಠದ ಸಂಚಾಲಕರಾದ ಪರಮೇಶ್ ಗೌಡ, ಶಿಕ್ಷಕರಾದ ತೇಜಸ್ವಿನಿ, ಸಮಾಜ ಸೇವಕರಾದ ಕಾಂತಿಲಾಲ್ ಜೈನ್, ಪ್ರಮೋದ್ ಗೌಡ, ನವೀನ್, ಕಿರಣ್, ಭಾನುಮತಿ, ಶಿವು ಇನ್ನಿತರರು ಹಾಜರಿದ್ದರು.





