ಗುಂಡಿಕ್ಕಿ ಕೊಲ್ಲುವುದೇ ಪರಿಹಾರವೇ?
ಮಾನ್ಯರೇ,
ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿಗೆ ಬಾಲಕ ಮೃತಪಟ್ಟಿರುವುದರ ಪರಿಣಾಮವಾಗಿ ಹುಲಿಯನ್ನು ಹಿಡಿಯಲು ಸಾಧ್ಯವಾಗದಿದ್ದರೆ ಗುಂಡಿಕ್ಕಿ ಕೊಲ್ಲುವ ಆದೇಶ ನೀಡಲಾಗಿದೆ. ಇದು ವಿಷಾದನೀಯ.
ಇತ್ತೀಚಿನ ವರ್ಷಗಳಲ್ಲಿ ವನ್ಯ ಮೃಗಗಳನ್ನು ನಿರಂತರವಾಗಿ ಗುಂಡಿಟ್ಟು ಕೊಲ್ಲುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಪ್ರತಿಯೊಂದಕ್ಕೂ ಹೀಗೆಯೇ ವನ್ಯಮೃಗಗಳನ್ನು ಗುಂಡಿಕ್ಕಿ ಕೊಲ್ಲುತ್ತಾ ಹೋದರೆ ಮುಂದೊಂದು ದಿನ ಅವುಗಳ ಸಂತತಿಯೇ ಸಂಪೂರ್ಣವಾಗಿ ನಶಿಸಿ ಹೋಗುವುದರಲ್ಲಿ ಅನುಮಾನವಿಲ್ಲ. ಪ್ರತಿಯೊಂದಕ್ಕೂ ಗುಂಡಿಕ್ಕಿ ಕೊಲ್ಲುವುದೇ ಪರಿಹಾರವಲ್ಲ.
ವನ್ಯಮೃಗಗಳನ್ನು ಸೆರೆಹಿಡಿಯಲು ಅಥವಾ ನಾಡಿನತ್ತ ಬಾರದಂತೆ ಮಾಡಲು ಬೇರೆ ಬೇರೆ ರೀತಿಯ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಯೋಜನೆ ರೂಪಿಸಬಹುದಲ್ಲವೇ? ಆಹಾರದ ಅಸಮತೋಲನದಿಂದಾಗಿ ವನ್ಯಮೃಗಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕುತ್ತಿರುವುದಂತೂ ಸ್ಪಷ್ಟ. ಅದಕ್ಕೆ ಕಾರಣ ಅರಣ್ಯ ನಾಶ, ಗಣಿಗಾರಿಕೆ, ದುರಾಸೆ, ಪ್ರಕೃತಿ ಮೇಲಿನ ಅತಿಯಾದ ಹಸ್ತಕ್ಷೇಪ ಹೀಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಮಾನವ ಮತ್ತು ಪ್ರಾಣಿಗಳ ನಡುವಿನ ನಿರಂತರ ಸಂಘರ್ಷಕ್ಕೆ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಸಿಗುತ್ತವೆ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳದೆ ಪ್ರಾಣಿಗಳನ್ನು ಕೊಲ್ಲುವುದು ಎಷ್ಟು ಸರಿ? ಸರಕಾರ ಇನ್ನು ಮುಂದೆಯಾದರೂ ಸರಿಯಾದ ಯೋಜನೆ ರೂಪಿಸಿ ಕಾಡಿನ ಸಂಪತ್ತನ್ನು ಕಾಪಾಡಬೇಕಾಗಿದೆ.





