ಭ್ರಷ್ಟಾಚಾರ, ಮೌಢ್ಯ ಆಚರಣೆ: ಮೂವರು ಹಾಲಿ ನ್ಯಾಯಾಧೀಶರ ಬಂಧನ ಸಾಧ್ಯತೆ

ಸಾಂದರ್ಭಿಕ ಚಿತ್ರ
ಮುಂಬೈ, ಮಾ. 12 : ವಿಚಿತ್ರ ಮೌಢ್ಯ ಆಚರಣೆ ಹಾಗು ಹಣದ ಅವ್ಯವಹಾರದ ಆರೋಪದ ಮೇಲೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಈಗ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ನ್ಯಾಯಾಧೀಶರು ಬಂಧನಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೂವರೂ ದಶಕದ ಹಿಂದೆ ತಾವು ಟ್ರಸ್ಟಿಗಳಾಗಿದ್ದ ದೇವಸ್ಥಾನವೊಂದರಲ್ಲಿ ಮಾಡಿದ್ದರೆನ್ನಲಾದ ಮೌಢ್ಯ ಆಚರಣೆ ಹಾಗು ಅದರ ಹೆಸರಲ್ಲಿ ದೇವಳದ ದುಡ್ಡು ಗುಳುಂ ಮಾಡಿದ ವಿಚಿತ್ರ ಹಾಗು ಗಂಭೀರ ಆರೋಪ ಎದುರಿಸುತ್ತಿದ್ದಾರೆ thewire.in ವರದಿ ಮಾಡಿದೆ.
ಪ್ರಕರಣದ ವಿರುದ್ಧ ನಡೆದ ಸತತ ಹೋರಾಟ ಹಾಗೂ ಈಗ ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠ ಈ ಬಗ್ಗೆ ನೀಡಿರುವ ತೀರ್ಪಿನ ಆಧಾರದಲ್ಲಿ ಈ ಮೂವರೂ ಬಂಧನ ಭೀತಿ ಎದುರಿಸುತ್ತಿದ್ದಾರೆ. ಪಶ್ಚಿಮ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಪ್ರಖ್ಯಾತ ಮೊಹ್ತಾ ದೇವಿ ದೇವಸ್ಥಾನದ ಟ್ರಸ್ಟಿಗಳಾಗಿದ್ದ ಈ ಮೂವರು ನ್ಯಾಯಾಧೀಶರು ಟ್ರಸ್ಟ್ ಹಣದಿಂದ ಎರಡು ಕೇಜಿ ಚಿನ್ನ ಖರೀದಿಸಲು ಕಾನೂನು ಬಾಹಿರ ನಿರ್ಣಯ ಮಾಡಿದ್ದರು. ಅಂದ ಹಾಗೆ ಈ ಎರಡು ಕೇಜಿ ಚಿನ್ನವನ್ನು ದೇವಸ್ಥಾನದ ಅಡಿಯಲ್ಲಿ ಹೂತು ಹಾಕಿ ಆ ಮೂಲಕ ದೇವಿಯ ಶಕ್ತಿಯನ್ನು 'ಹೆಚ್ಚಿಸಲು' ಅವರು ಬಯಸಿದ್ದರು ಎಂದು ಆರೋಪಿಸಲಾಗಿದೆ.
ಬಂಧನದ ಭೀತಿಯಲ್ಲಿರುವ ಮೂವರು ನ್ಯಾಯಾಧೀಶರುಗಳ ಪೈಕಿ ಒಬ್ಬರಾಗಿರುವ ನಿತಿನ್ ತ್ರಿಭುವನ್ ಎಂಬವರು ಈಗಾಗಲೇ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇನ್ನೊಂದು ಸೆಶನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದರೂ ಅವರ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದರಿಂದ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿದೆ.
ತ್ರಿಭುವನ್ ಅವರು ನಂದೇಡ್ ಜಿಲ್ಲೆಯ ಕಂಧರ್ ಎಂಬಲ್ಲಿ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಸಲುವಾಗಿ ಅಗತ್ಯ ಪ್ರಕ್ರಿಯೆಗಳಿಗೆ ಅನುಮತಿಯನ್ನು ಪಡೆಯುವ ನಿಟ್ಟಿನಲ್ಲಿ ಪರ್ಥಡಿ ಪೊಲೀಸರು ಕಾರ್ಯತತ್ಪರರಾಗಿದ್ದಾರೆ. ತ್ರಿಭುವನ್ ಅವರು ಅಹ್ಮದ್ನಗರ್ ಜಿಲ್ಲೆಯ ಮೊಹ್ತಾ ದೇವಿ ದೇವಸ್ಥಾನದ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರೆ ಟ್ರಸ್ಟಿನ ಇತರ ಸದಸ್ಯರ ಪೈಕಿ ಅಹ್ಮದ್ನಗರ ಮುಖ್ಯ ನ್ಯಾಯಾಧೀಶ ನಾಗೇಶ್ ನವ್ಕರ್ ಹಾಗೂ ಇನ್ನೊಬ್ಬ ನ್ಯಾಯಾಧೀಶರಿದ್ದರು.
ಸ್ಥಳೀಯ 'ದೇವಮಾನವ' ಪ್ರದೀಪ್ ಜಾಧವ್ ಎಂಬಾತ 2 ಕೆಜಿ ಚಿನ್ನದ ಆಯುಧ ತಯಾರಿಸುವಂತೆ ದೇವಳದ ಶ್ರೀ ಜಗದಂಬಾ ದೇವಿ ಸಾರ್ವಜನಿಕ ಟ್ರಸ್ಟ್ ಗೆ ಸೂಚಿಸಿದ್ದನೆಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ ಚಿನ್ನವನ್ನು ದೇವಸ್ಥಾನದಡಿ ಹೂತು ಹಾಕಲು ಇನ್ನೊಂದು ರೂ 25 ಲಕ್ಷ ಖರ್ಚು ಮಾಡಲಾಗಿತ್ತು.
ಘಟನೆ 2010ರಲ್ಲಿ ನಡೆದಿದ್ದರೂ 2017ರಲ್ಲಿ ಮರಾಠಿ ದೈನಿಕ 'ಲೋಕಮತ್' ಈ ಕುರಿತು ವರದಿ ಪ್ರಕಟಿಸಿದ ನಂತರ ಈ ವಿಚಾರ ಬೆಳಕಿಗೆ ಬಂದು ನಾಮದೇವ್ ಗರದ್ ಎಂಬವರು ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠಕ್ಕೆ ಅಪೀಲು ಸಲ್ಲಿಸಿ ಟ್ರಸ್ಟ್ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿದ್ದರು.







