ಉಡುಪಿ: ಮಾ.13ರಂದು ಕೌಟುಂಬಿಕ ನ್ಯಾಯಾಲಯ ಉದ್ಘಾಟನೆ
ಉಡುಪಿ, ಮಾ.12: ಉಡುಪಿ ವಕೀಲರ ಸಂಘದ ಬಹುಕಾಲದ ಬೇಡಿಕೆಯಾದ ಉಡುಪಿಯಲ್ಲಿ ಕೌಟುಂಬಿಕ ನ್ಯಾಯಾಲಯ ಸ್ಥಾಪನೆಗೆ ರಾಜ್ಯ ಉಚ್ಛ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದ್ದು, ಮಾ.13ರಂದು ಬೆಳಗ್ಗೆ 11:30ಕ್ಕೆ ಅದು ಉದ್ಘಾಟನೆ ಗೊಳ್ಳಲಿದೆ.
ಉಡುಪಿಯ ಕುಟುಂಬ ನ್ಯಾಯಾಲಯವನ್ನು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಅಭಯ್ ಶ್ರೀನಿವಾಸ ಓಕ್ ಅವರು ವೀಡಿಯೋ ಕಾನ್ಫರೆನ್ಸ್ (ವರ್ಚುವಲ್) ಮೂಲಕ ಇದನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಜ.ಅರವಿಂದ ಕುಮಾರ್, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜ.ಜಾನ್ ಮೈಕೆಲ್ ಕುನ್ಹಾ, ಹೈಕೋರ್ಟಿನ ನ್ಯಾಯಮೂರ್ತಿಗಳೂ, ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆಗಿರುವ ಜ.ಸೂರಜ್ ಗೋವಿಂದರಾಜ್ ಹಾಗೂ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಉಪಸ್ಥಿತ ರಿರುವರು.
ಉಡುಪಿ ನ್ಯಾಯಾಲಯ ಸಂಕೀರ್ಣದಲ್ಲಿ ನೂತನ ಕುಟುಂಬ ನ್ಯಾಯಾಲಯವೂ ಕಾರ್ಯನಿರ್ವಹಿಸಲಿದ್ದು, ಇಲ್ಲಿ ಕುಟುಂಬದ ವ್ಯಾಜ್ಯಗಳು ವಿವಾಹ ವಿಚ್ಛೇಧನ, ಪತಿ-ಪತ್ನಿಗೆ ಸಂಬಂಧಿಸಿದ ಜೀವನಾಂಶ, ಹಣಕಾಸು, ಆಸ್ತಿ ವಿವಾದಗಳು ತೀರ್ಮಾನ ಗೊಳ್ಳಲಿದೆ ಎಂದು ವಕೀಲರ ಸಂಘದ ಪ್ರಕಟಣೆ ತಿಳಿಸಿದೆ.





