ವಿಧಾನ ಸೌಧ ಚಲೋ ಹೋರಾಟಕ್ಕೆ ವ್ಯಾಪಕ ಬೆಂಬಲ: ರವಿಕಿರಣ್ ಪುಣಚ

ಕುಂದಾಪುರ, ಮಾ.12: ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ-ಕಾರ್ಮಿಕ ವಿರೋಧಿ ಕೃಷಿ, ಕಾರ್ಮಿಕ ಸಂಹಿತೆಗಳ ರದ್ಧತಿ ಗಾಗಿ, ಬೆಲೆ ಏರಿಕೆ, ಖಾಸಗೀಕರಣ ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಮಾ. 22ರಂದು ಜರಗಲಿರುವ ವಿಧಾನ ಸೌಧ ಚಲೋ ಹೋರಾಟವನ್ನು ಬೆಂಬಲಿಸಿ ಉಡುಪಿ ಜಿಲ್ಲೆಯಿಂದ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳೆಯರ ಸಂಘಟನೆಗಳ ಸದಸ್ಯರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿರುವರು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದ್ದಾರೆ.
ಕುಂದಾಪುರ ಕಾರ್ಮಿಕ ಭವನದಲ್ಲಿ ಮಾ.10ರಂದು ಜರಗಿದ ಉಡುಪಿ ಜಿಲ್ಲಾ ರೈತ, ದಲಿತ, ಕಾರ್ಮಿಕ, ಕೃಷಿಕೂಲಿಕಾರರ ಸಂಘಟನೆಗಳ ಜಂಟಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಾರಾಮ ನಾಯಕ್ ಮಾತನಾಡಿ, ರೈತ ವಿರೋಧಿ, ಕಾರ್ಪೊರೇಟ್ ಪರ ಕೇಂದ್ರ ಸರಕಾರದ ಮೂರು ಕೃಷಿ ಕಾಯಿದೆಗಳು ಹಾಗೂ ವಿದ್ಯುತ್ ಕಾಯಿದೆ-2020 ಕೂಡಲೇ ರದ್ಧು ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ಕಿಣಿ, ವಿಕಾಸ್ ಹೆಗ್ಡೆ ಮಾತನಾಡಿದರು. ರೈತ ಮುಖಂಡರಾದ ತೆಕ್ಕಟ್ಟೆ ಭಾಸ್ಕರ ಶೆಟ್ಟಿ, ರಾಜೀವ ಪಡುಕೋಣೆ, ಶ್ರೀಧರ ನಾಡಾ, ಗಣೇಶ ಮೊಗವೀರ, ಬೈಂದೂರು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರೊನಾಲ್ಡ್ ರಾಜೇಶ ಕ್ವಾಡ್ರಸ್ ಮೊದಲಾದವರು ಉಪಸ್ಥಿತರಿದ್ದರು.
ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಕಾರ್ಯಕ್ರಮ ನಿರೂಪಿಸಿದರು.







