ಉಡುಪಿ: ರಸ್ತೆಯಿಂದ ಸ್ಥಳಾಂತರಿಸದ ವಿದ್ಯುತ್ ಕಂಬದಲ್ಲಿ ‘ತಾಂಟ್ರೇ ಬಾ ತಾಂಟ್’ ಫಲಕ !

ಉಡುಪಿ, ಮಾ.12: ಕಲ್ಯಾಣಪುರ ಚರ್ಚ್‌ನ ಎದುರಿನ ವಿದ್ಯುತ್ ಕಂಬವೊಂದರಲ್ಲಿ ಆಳವಡಿಸಲಾದ ‘ತಾಂಟ್ರೇ ಬಾ ತಾಂಟ್’ ಎಂಬ ಫಲಕವು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಚರ್ಚ್ ಎದುರಿನ ರಸ್ತೆ ಬದಿ ಇರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸದೆ ಅಲ್ಲಿಯೇ ಉಳಿಸಿಕೊಂಡಿತ್ತು. ಈ ಕಂಬಕ್ಕೆ 'ತಾಂಟ್ರೆ ಬಾ ತಾಂಟ್' ಎಂಬ ಫಲಕವನ್ನು ಆಳವಡಿಸಿದ್ದು, ಅಲ್ಲದೆ ಇದರಲ್ಲಿ ಶುಭಕೋರುವವರು ಮೆಸ್ಕಾಂ ಎಂದು ಬರೆದಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಬರಹ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೆಸ್ಕಾಂ ಅಧಿಕಾರಿಗಳು, ಕೂಡಲೇ ವಿದ್ಯುತ್ ಕಂಬದಲ್ಲಿದ್ದ ಫಲಕ ವನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಸ್ಕಾಂ ಬ್ರಹ್ಮಾವರ ಕಚೇರಿಯ ಸಹಾಯಕ ಎಂಜಿನಿಯರ್ ನವೀನ್, ಮೆಸ್ಕಾಂನಿಂದ ಇಂತಹ ಯಾವುದೇ ಫಲಕವನ್ನು ವಿದ್ಯುತ್ ಕಂಬಕ್ಕೆ ಆಳವಡಿಸಿಲ್ಲ. ಲೋಕೋಪಯೋಗಿ ಇಲಾಖೆ ವಿದ್ಯುತ್ ಕಂಬ ಸ್ಥಳಾಂತರಿಸಲು ಹಣ ಪಾವತಿಸದ ಹಿನ್ನೆಲೆಯಲ್ಲಿ ಅವುಗಳನ್ನು ಸ್ಥಳಾಂತರಿಸಿಲ್ಲ ಎಂದು ತಿಳಿಸಿದ್ದಾರೆ.







