ಭೂಮಿಯ ಸಮೀಪದಿಂದ ಹಾದುಹೋಗಲಿರುವ ಅತಿ ದೊಡ್ಡ ಕುಬ್ಜಗ್ರಹ

ಸಾಂದರ್ಭಿಕ ಚಿತ್ರ
ವಾಶಿಂಗ್ಟನ್, ಮಾ. 12: ಮಾರ್ಚ್ 21ರಂದು ಕುಬ್ಜ ಗ್ರಹವೊಂದು ಭೂಮಿಯಿಂದ ಸುಮರು 20 ಲಕ್ಷ ಕಿಲೋಮೀಟರ್ ದೂರದಲ್ಲಿ ಹಾದುಹೋಗಲಿದೆ. ಇದು ಈ ವರ್ಷ ಭೂಮಿಯ ಸಮೀಪ ಹಾದು ಹೋಗುವ ಅತ್ಯಂತ ದೊಡ್ಡ ಕುಬ್ಜಗ್ರಹವಾಗಿದೆ ಎಂದು ಅವೆುರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಗುರುವಾರ ತಿಳಿಸಿದೆ.
ಇದು ಖಗೋಳ ವಿಜ್ಞಾನಿಗಳಿಗೆ ಕುಬ್ಬಗ್ರಹವೊಂದನ್ನು ಸಮೀಪದಲ್ಲಿ ನೋಡುವ ಅವಕಾಶವೊಂದನ್ನು ಒದಗಿಸಲಿದೆ ಎಂದು ಅದು ಹೇಳಿದೆ.
2001ಎಫ್ಒ32 ಎಂಬುದಗಿ ಕರೆಯಲ್ಪಡುವ ಈ ಕುಬ್ಜಗ್ರಹವು ಸುಮಾರು 3,000 ಅಡಿ ವ್ಯಾಸವನ್ನು ಹೊಂದಿದೆ. ಅದನ್ನು 20 ವರ್ಷಗಳ ಹಿಂದೆ ಪತ್ತೆಹಚ್ಚಲಾಗಿತ್ತು.
‘‘ಸೂರ್ಯನ ಸುತ್ತಲಿನ ಈ ಕುಬ್ಜಗ್ರಹದ ಕಕ್ಷಾ ಪಥ ನಮಗೆ ನಿಖರವಾಗಿ ತಿಳಿದಿದೆ. ಅದು 20 ಲಕ್ಷ ಕಿಲೋಮೀಟರ್ ಅಂತರಕ್ಕಿಂತಲೂ ಹೆಚ್ಚು ಭೂಮಿಯ ಸಮೀಪಕ್ಕೆ ಬರುವ ಸಾಧ್ಯತೆಯಿಲ್ಲ’’ ಎಂದು ಸೆಂಟರ್ ಫಾರ್ ನಿಯರ್ ಅರ್ತ್ ಆಬ್ಜೆಕ್ಟ್ ಸ್ಟಡೀಸ್ನ ನಿರ್ದೇಶಕ ಪೌಲ್ ಚೊಡಾಸ್ ಹೇಳಿದರು.
ಇದು ಭೂಮಿ ಮತ್ತು ಚಂದ್ರನ ನಡುವಿನ ಅಂತರದ ಸುಮಾರು 5.25 ಪಟ್ಟಾಗಿದೆ. ಆದರೂ, ‘ಸಂಭಾವ್ಯ ಅಪಾಯಕಾರಿ ಕುಬ್ಜಗ್ರಹ’ ಎಂಬುದಾಗಿ ಘೋಷಿಸಬಹುದಾದಷ್ಟು ಸಮೀಪದಲ್ಲಿರುತ್ತದೆ ಎಂದರು.
2001ಎಫ್ಒ32 ಕುಬ್ಜಗ್ರಹವು ಗಂಟೆಗೆ 77,000 ಮೈಲಿ ವೇಗದಲ್ಲಿ ಭೂಮಿಯ ಸಮೀಪದಿಂದ ಹಾದು ಹೋಗಲಿದೆ. ಈ ವೇಗವು ಭೂಮಿಯ ಸಮೀಪದಿಂದ ಹಾದು ಹೋಗುವ ಹೆಚ್ಚಿನ ಕುಬ್ಜಗ್ರಹಗಳಿಗಿಂತ ಅಧಿಕವಾಗಿದೆ.







