ಹಾಂಕಾಂಗ್: ಪ್ರಜಾಪ್ರಭುತ್ವದ ಉಸಿರುಗಟ್ಟಿಸುತ್ತಿರುವ ಚುನಾವಣಾ ಬದಲಾವಣೆ; ಅಮೆರಿಕ
ವಾಶಿಂಗ್ಟನ್, ಮಾ. 12: ಹಾಂಕಾಂಗ್‌ನ ಚುನಾವಣಾ ವ್ಯವಸ್ಥೆಗೆ ಚೀನಾ ಮಾಡಿರುವ ಆಮೂಲಾಗ್ರ ಬದಲಾವಣೆಗಳನ್ನು ಅವೆುರಿಕ ಗುರುವಾರ ಖಂಡಿಸಿದೆ. ಚೀನಾವು ವಿಶ್ವದ ಆರ್ಥಿಕ ರಾಜಧಾನಿಯಾಗಿರುವ ಹಾಂಕಾಂಗ್‌ನ ಪ್ರಜಾಪ್ರಭುತ್ವದ ಉಸಿರುಗಟ್ಟಿಸುತ್ತಿದೆ ಎಂದು ಅದು ಬಣ್ಣಿಸಿದೆ.
ಹಾಂಕಾಂಗನ್ನು ಬ್ರಿಟನ್ 1997ರಲ್ಲಿ ಚೀನಾಕ್ಕೆ ಹಸ್ತಾಂತರಿಸುವ ಮೊದಲು ಚೀನಾ ಮತ್ತು ಬ್ರಿಟನ್ ಜಂಟಿ ಘೋಷಣೆಯೊಂದಕ್ಕೆ ಸಹಿ ಹಾಕಿದ್ದವು. ಆ ಘೋಷಣೆಯಡಿ ಹಾಂಕಾಂಗ್ ಜನತೆಗೆ ಸ್ವಾಯತ್ತೆಯ ಭರವಸೆ ನೀಡಲಾಗಿತ್ತು. ಚೀನಾದ ರಬ್ಬರ್ ಸ್ಟಾಂಪ್ ಸಂಸತ್ ಈಗ ತೆಗೆದುಕೊಂಡಿರುವ ಕ್ರಮವು ಹಾಂಕಾಂಗ್‌ನ ಸ್ವಾಯತ್ತೆಯ ಮೇಲೆ ನಡೆದ ನೇರ ದಾಳಿಯಾಗಿದೆ ಎಂದು ಅಮೆರಿಕದ ವಿದೇಶ ಕಾಶರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹೇಳಿದ್ದಾರೆ.
‘‘ಚೀನಾ ಸಂಸತ್‌ನ ಈ ಕ್ರಮವು ಹಾಂಕಾಂಗ್ ಜನರ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ಸೀಮಿತಗೊಳಿಸುತ್ತದೆ, ಪ್ರಜಾಸತ್ತಾತ್ಮಕ ಪ್ರಾತಿನಿಧ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ರಾಜಕೀಯ ಚರ್ಚೆಯನ್ನು ನಿಗ್ರಹಿಸುತ್ತದೆ. ತಮ್ಮದೇ ಸಂಸತ್‌ನಲ್ಲಿ ಹಾಂಕಾಂಗ್ ಜನರ ಧ್ವನಿಯನ್ನು ಹತ್ತಿಕ್ಕುತ್ತದೆ’’ ಎಂದು ಹೇಳಿಕೆಯೊಂದರಲ್ಲಿ ಬ್ಲಿಂಕನ್ ತಿಳಿಸಿದ್ದಾರೆ.





