ಉಡುಪಿ: ದಿನದಲ್ಲಿ 5462 ಮಂದಿಯಿಂದ ಲಸಿಕೆ ಸ್ವೀಕಾರ
ಉಡುಪಿ, ಮಾ.12: ಜಿಲ್ಲೆಯ 60 ವರ್ಷಕ್ಕಿಂತ ಮೇಲ್ಪಟ್ಟ 3910 ಮಂದಿ ಹಿರಿಯ ನಾಗರಿಕರು ಸೇರಿದಂತೆ ಜಿಲ್ಲೆಯ ಒಟ್ಟು 5462 ಮಂದಿ ಶುಕ್ರವಾರ ಕೋವಿಡ್-19ಕ್ಕೆ ಲಭ್ಯವಿರುವ ಕೋವಿಶೀಲ್ಡ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ದಿನದಲ್ಲಿ 60 ಮೇಲ್ಪಟ್ಟ 3910 ಮಂದಿ ಹಿರಿಯ ನಾಗರಿಕರೊಂದಿಗೆ, 45ರಿಂದ 59 ವರ್ಷದೊಳಗಿನ ಅನ್ಯರೋಗದಿಂದ ನರಳುವ 543 ಮಂದಿ ಸಹ ಇಂದು ಈ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 10,090 ಮಂದಿ ಹಿರಿಯ ನಾಗರಿಕರು ಹಾಗೂ 1082 ಮಂದಿ 45-59 ವಯೋಮಾನದವರು ಲಸಿಕೆಯ ಮೊದಲ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದವರು ಹೇಳಿದರು.
ಉಳಿದಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಒಟ್ಟು 23,889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಇಂದು 207 ಮಂದಿ ಮೊದಲ ಡೋಸ್‌ನ್ನು (ಒಟ್ಟು 18,106-ಶೇ.76) ಪಡೆದರೆ, 496 ಮಂದಿ ಎರಡನೇ ಡೋಸ್‌ನ್ನು (ಒಟ್ಟು 13,677-ಶೇ.57)ಸ್ವೀಕರಿಸಿದ್ದಾರೆ.
ಎರಡನೇ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಜಿಲ್ಲೆಯ ಒಟ್ಟು 4283 ಮಂದಿ ಮುಂಚೂಣಿ ಕಾರ್ಯಕರ್ತರ ಪೈಕಿ ಇಂದು 26 ಮಂದಿ ಮೊದಲ ಡೋಸ್ ಪಡೆದಿದ್ದು, ಒಟ್ಟಾರೆಯಾಗಿ ಇವರ ಸಂಖ್ಯೆ 3260 (ಶೇ.76) ಆಗಿದೆ. ಅಲ್ಲದೇ 280 ಮಂದಿ ಇಂದು ಎರಡನೇ ಡೋಸ್ ಪಡೆದಿದ್ದು ಇವರ ಒಟ್ಟು ಸಂಖ್ಯೆ 534 ಆಗಿದೆ ಎಂದು ಡಾ.ಸೂಡ ವಿವರಿಸಿದರು.







