ಜಾರ್ಜ್ ಫ್ಲಾಯ್ಡಾ ಕೊಲೆ ಆರೋಪಿ ಪೊಲೀಸ್ ವಿರುದ್ಧ 3ನೇ ದರ್ಜೆ ಕೊಲೆ ಆರೋಪ:ನ್ಯಾಯಾಧೀಶ ಆದೇಶ
ಮಿನಪೊಲಿಸ್ (ಅವೆುರಿಕ), ಮಾ. 12: ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡಾರನ್ನು ಕೊಲೆಗೈದ ಆರೋಪವನ್ನು ಎದುರಿಸುತ್ತಿರುವ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್ ವಿರುದ್ಧ ಮೂರನೇ ದರ್ಜೆಯ ಕೊಲೆ ಆರೋಪವನ್ನು ಮರುಹೇರಬೇಕು ಎಂಬ ಪ್ರಾಸಿಕ್ಯೂಟರ್‌ಗಳ ಬೇಡಿಕೆಗೆ ಮಿನಸೋಟ ರಾಜ್ಯದ ನ್ಯಾಯಾಧೀಶರೊಬ್ಬರು ಗುರುವಾರ ಅಂಗೀಕಾರ ನೀಡಿದ್ದಾರೆ.
ಕಳೆದ ವರ್ಷದ ಮೇ 25ರಂದು ಫ್ಲಾಯ್ಡಾರನ್ನು ಬಂಧಿಸುವ ವೇಳೆ, ಅವರ ಕುತ್ತಿಗೆಯ ಮೇಲೆ ಈ ಪೊಲೀಸ್ ಅಧಿಕಾರಿ ಮೊಣಕಾಲೂರಿ 8 ನಿಮಿಷಗಳಿಗೂ ಅಧಿಕ ಕಾಲ ಕೂತಿದ್ದರು. ಅದರ ಪರಿಣಾಮವಾಗಿ ಫ್ಲಾಯ್ಡಾ ಉಸಿರುಗಟ್ಟಿ ಮೃತಪಟ್ಟಿದ್ದರು.
ಶಾವಿನ್ ವಿರುದ್ಧ ಈಗಾಗಲೇ ಎರಡನೇ ದರ್ಜೆಯ ಕೊಲೆ ಆರೋಪ ದಾಖಲಾಗಿದ್ದು, ಅದರ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಶಾವಿನ್ ವಿರುದ್ಧ ಮೂರನೇ ದರ್ಜೆಯ ಕೊಲೆ ಆರೋಪವನ್ನು ಹೊರಿಸುವ ಬಗ್ಗೆ ಮರುಪರಿಶೀಲಿಸುವಂತೆ ಕಳೆದ ವಾರ ಮಿನಸೋಟ ಮೇಲ್ಮನವಿ ನ್ಯಾಯಾಲಯವು ನ್ಯಾಯಾಧೀಶ ಪೀಟರ್ ಕಹಿಲಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶ ಪೀಟರ್ ಕಹಿಲಿ ಪ್ರಸಕ್ತ ಆದೇಶ ನೀಡಿದ್ದಾರೆ.
44 ವರ್ಷದ ಶಾವಿನ್ ಈಗಾಗಲೇ ಹೆಚ್ಚು ಗಂಭೀರ ಆರೋಪವಾಗಿರುವ ಎರಡನೇ ದರ್ಜೆ ಕೊಲೆ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಆರೋಪ ಸಾಬೀತಾದರೆ ಅವರು 40 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಬಹುದಾಗಿದೆ.







