295 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ಬಿಡುಗಡೆ: ಎಸ್.ಟಿ.ಸೋಮಶೇಖರ್

ಬೆಂಗಳೂರು, ಮಾ.12: ರಾಜ್ಯದ ರೈತರು ಸಹಕಾರ ಸಂಘ, ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು 2018ರ ಜು.10ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಗರಿಷ್ಠ ಒಂದು ಲಕ್ಷ ರೂ.ವರೆಗಿನ ಸಾಲದ ಮೊತ್ತವನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಮಾ.6ರ ಸರಕಾರದ ಆದೇಶದಲ್ಲಿ ಬಾಕಿ ಇರುವ 57,229 ರೈತರಿಗೆ ಅನುದಾನ ಬಿಡುಗಡೆ ಮಾಡಲು ಬಜೆಟ್‍ನಲ್ಲಿ ಲಭ್ಯವಿದ್ದ 260.41 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿರುವ 34.73 ಕೋಟಿ ರೂ.ಗಳನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಿದ್ದು, ಒಟ್ಟಾರೆ 295.14 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಸಾಲ ಮನ್ನಾ ಯೋಜನೆಯಲ್ಲಿ ಇದೇ ಆರ್ಥಿಕ ವರ್ಷದಲ್ಲಿ ಮುಕ್ತಾಯಗೊಳಿಸಲು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸರಕಾರ ಆಯವ್ಯಯದ ಅವಕಾಶದಲ್ಲಿ ಸದ್ಯ ಬಿಡುಗಡೆ ಮಾಡಿರುವ 260.41 ಕೋಟಿ ರೂ.ಗಳ ಜೊತೆಯಲ್ಲಿ 1 ಲಕ್ಷ ರೂ.ಗಳ ಸಾಲ ಮನ್ನಾ ಯೋಜನೆಯಲ್ಲಿ ಜಮಾ ಆಗಿರುವ ಬಡ್ಡಿ ಮತ್ತು ಸಹಕಾರ ಸಂಘಗಳು ಪಾವತಿಸಿರುವ ಮೊತ್ತ 23.78 ಕೋಟಿ ರೂ.ಮತ್ತು 50 ಸಾವಿರ ರೂ.ಗಳ ಸಾಲ ಮನ್ನಾ ಯೋಜನೆಯಲ್ಲಿ ಸಹಕಾರ ಸಂಘಗಳು ವಾಪಸ್ ಜಮಾ ನೀಡಿ ಠೇವಣಿ ಇರಿಸಿದ್ದ ಮೊತ್ತ 10.95 ಕೋಟಿ ರೂ.ಗಳನ್ನು ಅವಧಿಪೂರ್ವ ಪಕ್ವಗೊಳಿಸಿ 57,229 ರೈತರ ಉಳಿತಾಯ ಖಾತೆಗಳಿಗೆ 295.14 ಕೋಟಿ ರೂ.ಗಳನ್ನು ಎನ್‍ಇಎಫ್‍ಟಿ ಮೂಲಕ ಬಿಡುಗಡೆ ಮಾಡಲು ಸೂಚಿಸಲಾಗಿದೆ ಎಂದು ಸೋಮಶೇಖರ್ ತಿಳಿಸಿದ್ದಾರೆ.
ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನಲ್ಲಿ ಸಾಲ ಮನ್ನಾ ಯೋಜನೆಯಲ್ಲಿ ಉಳಿಯುವ ಮೊತ್ತವನ್ನು ಬಡ್ಡಿಯೊಂದಿಗೆ 15 ದಿನಗಳ ಅವಧಿಗೆ ಠೇವಣಿ ನವೀಕರಿಸಲು ಸೂಚಿಸಲಾಗಿದೆ ಎಂದು ಸೋಮಶೇಖರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.







