ಕೋವಿಡ್ ಎರಡನೇ ಅಲೆ ಭೀತಿ: ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು, ಮಾ. 12: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಾಗುತ್ತಿದ್ದು, ಎರಡನೆ ಅಲೆಯ ಅಪಾಯವನ್ನು ನಿಯಂತ್ರಿಸಲು ಕೊರೋನ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ ಹೊರಡಿಸಿದ್ದಾರೆ.
ಕೋವಿಡ್ ದೈನಂದಿನ ಪರೀಕ್ಷಾ ಪ್ರಮಾಣ ಹೆಚ್ಚಿಸಲಾಗಿದ್ದು, ಬೆಂಗಳೂರು-40 ಸಾವಿರ, ದಕ್ಷಿಣ ಕನ್ನಡ, ಬೆಳಗಾವಿ ತಲಾ 3 ಸಾವಿರ, ಮೈಸೂರು-5 ಸಾವಿರ, ತುಮಕೂರು-3500, ಉಡುಪಿ ಹಾಗೂ ವಿಜಯಪುರ ತಲಾ 2 ಸಾವಿರ ಪರೀಕ್ಷೆಗಳು ಹಾಗೂ ಉಳಿದ ಜಿಲ್ಲೆಗಳಲ್ಲಿ ಈ ಹಿಂದೆ ನೀಡಿರುವ ಗುರಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿ ಪಾಲಿಸಬೇಕು. ಮದುವೆಗೆ 500 ಮಂದಿ, ಜನ್ಮ ದಿನಾಚರಣೆ 100, ಶವಸಂಸ್ಕಾರ-100, ಧಾರ್ಮಿಕ ಹಾಗೂ ರಾಜಕೀಯ ಸಮಾರಂಭಗಳಲ್ಲಿ 500 ಜನರಿಗೆ ಮೀರುವಂತಿಲ್ಲ. ಕೇರಳ ಹಾಗೂ ಮಹಾರಾಷ್ಟ್ರಗಳಿಂದ ಬರುವವರಿಗೆ ಆರ್‍ಟಿಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿದ್ದು, ಸದರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ನಿರ್ದೇಶಿಸಲಾಗಿದೆ.





