ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಮಂಗಳೂರು, ಮಾ.12: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಎರಡು ದಿನಗಳ ಮಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಬಲೂನ್ ಹಾಗೂ ಪಾರಿವಾಳ ಹಾರಿಸುವುದರ ಮೂಲಕ ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವವರಿಗೆ ದೈಹಿಕ, ಮಾನಸಿಕ ಒತ್ತಡ ಹೆಚ್ಚಿರುತ್ತದೆ. ಇಂತಹ ಕ್ರೀಡಾಕೂಟದಿಂದ ಮಾನಸಿಕವಾಗಿ ಉಲ್ಲಸಿತರಾಗುವುದರೊಂದಿಗೆ ತಮ್ಮಲ್ಲಿರುವ ಕೌಶಲವನ್ನು ಪ್ರದರ್ಶಿಸಲು ಅವಕಾಶ ವಾಗುತ್ತದೆ ಎಂದು ಹೇಳಿದರು. ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತರಾದ ಅಧಿಕಾರಿಗಳು, ಸಿಬ್ಬಂದಿಗಳಿದ್ದಾರೆ. ಇವರುಗಳ ಭಾಗವಹಿಸುವಿಕೆಯಿಂದ ಈ ಕ್ರೀಡಾಕೂಟ ಯಶಸ್ವಿಯಾಗಲಿದೆ ಎಂದರು.
ಬಳಿಕ ಕ್ರೀಡಾಜ್ಯೋತಿಯನ್ನು ಬೆಳಗಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು. ಉಪ ಪೊಲೀಸ್ ಆಯುಕ್ತರಾದ ವಿನಯ್ ಗಾಂವ್ಕರ್, ಹರಿರಾಮ್ ಶಂಕರ್, ಎಸಿಪಿಗಳಾದ ನಟರಾಜ್, ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.





