ಮಾ.15 : ಎಂಆರ್‌ಪಿಎಲ್ ದ್ವಾರದ ಮುಂಭಾಗ ಜೋಕಟ್ಟೆ ಗ್ರಾಮಸ್ಥರ ಧರಣಿ
ಮಂಗಳೂರು : 2017ರ ಸರಕಾರಿ ಆದೇಶದ ಪ್ರಕಾರ ಜೋಕಟ್ಟೆ, ಕಳವಾರು, ಕೆಂಜಾರು ಜನ ವಸತಿ ಭಾಗದಲ್ಲಿ ಕೋಕ್, ಸಲ್ಫರ್ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಸಿರು ವಲಯ ನಿರ್ಮಿಸಲು ಕಂಪೆನಿ ಹಿಂದೇಟು ಹಾಕುವುದನ್ನು ಖಂಡಿಸಿ ಮತ್ತು ಕಂಪೆನಿಯ ಮಾಲಿನ್ಯದಿಂದ ಗ್ರಾಮಸ್ಥರ ಆರೋಗ್ಯದ ಮೇಲಾಗಿರುವ ಪರಿಣಾಮವನ್ನು ತಿಳಿಯಲು ಅಧ್ಯಯನ ನಡೆಸುವಂತೆ ಒತ್ತಾಯಿಸಿ ಮಾ.15ರಂದು ಬೆಳಗ್ಗೆ 10ಗಂಟೆಗೆ ಜೋಕಟ್ಟೆಯಲ್ಲಿರುವ ಎಂಆರ್‌ಪಿಎಲ್ ಪ್ರಧಾನ ದ್ವಾರದ ಮುಂಭಾಗ ‘ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿ’ಯು ಧರಣಿ ಹಮ್ಮಿಕೊಂಡಿದೆ.
ನಿಯಮಗಳನ್ನು ಉಲ್ಲಂಘಿಸಿ ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮದ ಜನವಸತಿ ಪ್ರದೇಶದಲ್ಲಿ ಎಂಆರ್‌ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕವನ್ನು ಸ್ಥಾಪಿಸಿತ್ತು. ಹಸಿರು ವಲಯ ನಿರ್ಮಾಣವನ್ನು ಕಡೆಗಣಿಸಿತ್ತು. ಇದರಿಂದ ಉಂಟಾದ ಕೋಕ್‌ಸಲ್ಫರ್ ಕೆಮಿಕಲ್ ಮಾಲಿನ್ಯದಿಂದ ಕಂಗೆಟ್ಟ ಗ್ರಾಮಸ್ಥರು ವರ್ಷಗಳ ಕಾಲ ತೀವ್ರತರದ ಹೋರಾಟ ನಡೆಸಿದ್ದರು. ಈ ಹೋರಾಟದ ಫಲವಾಗಿ ಸರಕಾರ ಸಮಿತಿಯೊಂದನ್ನು ನೇಮಿಸಿ ಪಡೆದ ವರದಿಯನ್ನು ಆಧರಿಸಿ ಆರು ಅಂಶಗಳ ಪರಿಹಾರ ಕ್ರಮಕೈಗೊಳ್ಳಲು ಕಂಪೆನಿಗೆ ಆದೇಶಿಸಿತ್ತು. ಈ ಆರು ಅಂಶಗಳಲ್ಲಿ ಐದು ಅಂಶಗಳನ್ನು ಅಂಶಿಕವಾಗಿ ಈಡೇರಿಸಿದ ಕಂಪೆನಿ 27 ಎಕರೆಯಲ್ಲಿ ಕಂಪೆನಿ ಹಾಗು ಜನವಸತಿ ನಡುವೆ ನಿರ್ಮಿಸಬೇಕಾಗಿದ್ದ ಹಸಿರು ವಲಯ ಸ್ಥಾಪನೆಯನ್ನು ಕಡೆಗಣಿಸುತ್ತಾ ಬಂದಿದೆ. ಇದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಗ್ರಾಮಸ್ಥರು ಹಲವು ರೀತಿಯ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹಸಿರು ವಲಯ ಸ್ಥಾಪನೆಯ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು, ಗ್ರಾಮಸ್ಥರ ಆರೋಗ್ಯ ಸ್ಥಿತಿಯ ಅಧ್ಯಯನ ನಡೆಸಬೇಕು, ಕಂಪೆನಿಯ ಮಾಲಿನ್ಯದಿಂದ ಗ್ರಾಮಸ್ಥರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿರುವುದಾಗಿ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆಯ ಪ್ರಮುಖರಾದ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





