ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಯಕ್ಷಧ್ರುವದ 'ಪಟ್ಲ ಪ್ರಶಸ್ತಿ'
ಮಂಗಳೂರು,ಮಾ.12: ಯಕ್ಷಗಾನದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದ ತೆಂಕು ತಿಟ್ಟಿನ ಪ್ರಖ್ಯಾತ ಯುವ ಭಾಗವತ ರಾದ ಪಟ್ಲಗುತ್ತು ಸತೀಶ್ ಶೆಟ್ಟಿ ಯವರು ಸಮಾನಮನಸ್ಕ ಸಹೃದಯಿ ಬಂಧುಗಳ ಸಹಕಾರದೊಂದಿಗೆ ಸ್ಥಾಪಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಆರು ವರ್ಷಗಳ ಅವಧಿಯಲ್ಲಿ ಸುಮಾರು 5 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೊತ್ತವನ್ನು ವಿವಿಧ ಸೇವಾ ಯೋಜನೆಗಳ ಮುಖಾಂತರ ಯಕ್ಷಗಾನ ಕಲಾವಿದರಿಗಾಗಿ ವಿನಿಯೋಗಿಸಿದೆ ಎಂದು ತಿಳಿಸಲು ಸಂತಸ ಪಡುತ್ತಿರುವುದಾಗಿ ಟ್ರಸ್ಟ್ ನ ಪ್ರಧಾನ ಕಾರ್ಯ ದರ್ಶಿ ಪುರುಷೋತ್ತಮ ಭಂಡಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪ್ರತಿ ವರ್ಷದಂತೆ "ಪಟ್ಲ ಸಂಭ್ರಮ 2021ನ್ನು ಮೇ.25..2021ನೇ ಮಂಗಳವಾರದಂದು ಶ್ರೀ ಕ್ಷೇತ್ರ ಪಾವಂಜೆಯಲ್ಲಿ ಆಯೋಜಿಸ ಲಾಗುವುದು. ಬೆಳಿಗ್ಗೆ ಗಂಟೆ 9 ರಿಂದ ರಾತ್ರಿ ಗಂಟೆ 12ರ ತನಕ ನಡೆಯುವ "ಪಟ್ಲ ಸಂಭ್ರಮದಲ್ಲಿ ಕಲಾವಿದರಿಗೊಸ್ಕರ ವಿವಿಧ ಯೋಜನೆಗಳಡಿಯಲ್ಲಿ ಧನಸಹಾಯವನ್ನು ವಿತರಿಸಲಾಗಿವುದು. ಕಲಾವಿದರಿಗೆ ಅಪಘಾತ ವಿಮಾ ಯೋಜನೆ, ಮನೆ ಕಟ್ಟಲು ನರವು, ಅನಾರೋಗ್ಯದಲ್ಲಿರುವವರಿಗೆ ಚಿಕಿತ್ಸಾ ವೆಚ್ಚ, ಗೌರವಧನ ವಿತರಣೆ, ಯಕ್ಷ ಕಲಾ ಗೌರವ ಹಾಗೂ ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಈ ವರ್ಷದ "ಪಟ್ಲ ಪ್ರಶಸ್ತಿ 2021'ನ್ನು ತೆಂಕುತಿಟ್ಟಿನ ಹಿರಿಯ ಭಾಗವತರು ಹಾಗೂ ಅನೇಕ ಶಿಷ್ಯ ವೃಂದವನ್ನು ಹೊಂದಿರುವ ಪಟ್ಲ (ಸತೀಶ್ ಶೆಟ್ಟಿಯವರ ) ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಗೆ ಪ್ರಧಾನ ಮಾಡಲಾಗುವುದು. ಪೂರ್ವರಂಗ, ಗಾನ ವೈಭವ, ಮಹಿಳಾ ಯಕ್ಷಗಾನ, ತುಳು ತಾಳಮದ್ದಲೆ ಹಾಗೂ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣೇಶ್ವರ ಯಕ್ಷಗಾನ ಮಂಡಳಿ ಯವರಿಂದ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ಪಟ್ಲ ಸಂಭ್ರಮಾಧ್ಯಕ್ಷರಾಗಿ ತುಳು ಸಂಘ ಬರೋಡಾದ ಅಧ್ಯಕ್ಷರು, ಯಕ್ಷ ಕಲಾ ಪೋಷಕರಾಗಿರುವ ಬರೋಡಾದ ಖ್ಯಾತ ಉದ್ಯಮಿ ಶಶಿಧರ ಶೆಟ್ಟಿಯವರು ಸಂಪೂರ್ಣ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರದಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಡಾ.ಮನುರಾವ್ ,ಕೋಶಾಧಿಕಾರಿ ಸುದೇಶ್ ಕುಮಾರ್ ರೈ,ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ ಮೊದಲಾದ ವರು ಉಪಸ್ಥಿತರಿದ್ದರು.







