ಕೃತಿಸ್ವಾಮ್ಯ ಉಲ್ಲಂಘನೆ ಆರೋಪ: ಕಂಗನಾ ವಿರುದ್ಧ ದೂರು ದಾಖಲಿಸಲು ಸೂಚನೆ

ಮುಂಬೈ, ಮಾ.12: ಕೃತಿಸ್ವಾಮ್ಯ ಉಲ್ಲಂಘನೆ ಪ್ರಕರಣದಲ್ಲಿ ನಟಿ ಕಂಗನಾ ರಣಾವತ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಂಬೈಯ ನ್ಯಾಯಾಲಯ ನಗರ ಪೊಲೀಸರಿಗೆ ಸೂಚಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
‘ದಿಡ್ಡಾ: ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ್’ ಎಂಬ ಕೃತಿಯ ಲೇಖಕ ಆಶೀಷ್ ಕೌಲ್ ಎಂಬವರು ಕಂಗನಾ ರಣಾವತ್ ವಿರುದ್ಧ ಕೃತಿಸ್ವಾಮ್ಯ ಉಲ್ಲಂಘನೆಯ ದೂರು ನೀಡಿದ್ದರು. ಈ ಕೃತಿಯನ್ನು ಹಿಂದಿಗೆ ‘ಕಾಶ್ಮೀರಿ ಕಿ ಯೋಧಾ ರಾಣಿ ದಿಡ್ಡಾ’ ಎಂಬ ಹೆಸರಿನಲ್ಲಿ ಅನುವಾದಿಸಲಾಗಿದೆ.
ಜಮ್ಮು ಕಾಶ್ಮೀರದ ಲೋಹರ್(ಈಗ ಪೂಂಛ್) ಪ್ರಾಂತ್ಯದ ರಾಜಕುಮಾರಿಯಾಗಿದ್ದ ದಿದ್ದಾರ ಬದುಕಿನ ಕುರಿತ ಕೃತಿಯ ಕೃತಿಸ್ವಾಮ್ಯ ತನ್ನ ಹೆಸರಲ್ಲಿದೆ. ಈ ಕಥೆ ಮತ್ತು ಪುಸ್ತಕದ ಅಂಶವನ್ನು ಖ್ಯಾತ ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂದು ಕೌಲ್ ದೂರು ನೀಡಿದ್ದರು.
ಕೆಲ ತಿಂಗಳ ಹಿಂದೆ ಹಿಂದಿ ಅನುವಾದಿತ ಕೃತಿಗೆ ಮುನ್ನುಡಿ ಬರೆಯುವಂತೆ ಕಂಗನಾ ರಣಾವತ್‌ರನ್ನು ಸಂಪರ್ಕಿಸಿದ್ದೆ. ಆದರೆ ಆ ಬಳಿಕ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದ ಕಂಗನಾ, ಮಣಿಕರ್ಣಿಕಾ ರಿಟರ್ನ್ಸ್: ದಿ ಸ್ಟೋರಿ ಆಫ್ ಕ್ವೀನ್ ದಿಡ್ಡಾ’ ಎಂಬ ಹೆಸರಿನ ಸಿನೆಮದಲ್ಲಿ ತಾನು ನಟಿಸುವುದಾಗಿ ಹೇಳಿದ್ದಾರೆ. ಈ ಕೃತಿಯ ಹಕ್ಕುಸ್ವಾಮ್ಯ ತನ್ನಲ್ಲಿದೆ ಎಂದು ಕೌಲ್ ಹೇಳಿರುವುದಾಗಿ ವರದಿಯಾಗಿದೆ. ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಖಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.







