ಗರ್ಭಿಣಿ ಅತ್ಯಾಚಾರ ಸಂತ್ರಸ್ತೆಗೆ ಕಾನೂನು ಹಕ್ಕಿನ ಬಗ್ಗೆ ತಿಳಿಹೇಳಬೇಕು: ಸುಪ್ರೀಂಕೋರ್ಟ್

ಹೊಸದಿಲ್ಲಿ, ಮಾ.12: ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗುವ ಸಂತ್ರಸ್ತೆಗೆ ಇರುವ ಕಾನೂನುಬದ್ಧ ಹಕ್ಕುಗಳ ಬಗ್ಗೆ ತಿಳಿಹೇಳುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ಬೇಡದ (ಇಚ್ಛೆಯಿಲ್ಲದ) ಗರ್ಭಧಾರಣೆಯ 20 ವಾರಗಳ ಬಳಿಕ ಗರ್ಭಪಾತಕ್ಕೆ ಅನುವು ಮಾಡಿಕೊಡುವ ಬಗ್ಗೆ ನಿರ್ಧರಿಸಲು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯಕೀಯ ಮಂಡಳಿಗಳನ್ನು ಆರಂಭಿಸಲು ಕೇಂದ್ರಕ್ಕೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಈ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಅರ್ಜಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಗರ್ಭಧಾರಣೆಯ 20 ವಾರಗಳ ಬಳಿಕ ಗರ್ಭಪಾತ ಮಾಡುವುದನ್ನು ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆಸ್ನಿ ಕಾಯ್ದೆಯ ಸೆಕ್ಷನ್ 3ರಡಿ ನಿಷೇಧಿಸಲಾಗಿದೆ.
ಓರ್ವ ಮಹಿಳೆ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾದರೆ, ಅವಳಿಗೆ ಇರುವ ಕಾನೂನುಬದ್ಧ ಹಕ್ಕಿನ ಬಗ್ಗೆ ತಿಳಿಹೇಳಬೇಕು ಎಂದು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ಹೇಳಿತು.
ಅತ್ಯಾಚಾರಕ್ಕೆ ಒಳಗಾದ 14 ವರ್ಷದ ಹುಡುಗಿ ಈಗ 26 ವಾರಗಳ ಗರ್ಭಿಣಿಯಾಗಿದ್ದು ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿದಾರರ ಪರ ನ್ಯಾಯವಾದಿ ವಿಕೆ ಬಿಜು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ, 20 ವಾರಗಳ ಬೇಡದ ಗರ್ಭಧಾರಣೆಯನ್ನು ಸಮಾಪ್ತಿಗೊಳಿಸುವ (ಗರ್ಭಪಾತ) ಬಗ್ಗೆ ನಿರ್ಧರಿಸಲು ಪ್ರತೀ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ವೈದ್ಯಕೀಯ ಮಂಡಳಿ ನೇಮಕಕ್ಕೆ ಮಾರ್ಗಸೂಚಿ ರಚಿಸುವಂತೆ ಕೋರಿದ್ದರು. ವೈದ್ಯಕೀಯ ಸಲಹೆ, ಅಭಿಪ್ರಾಯದಂತೆ 26 ವಾರಗಳ ಬಳಿಕ ಗರ್ಭಪಾತ ಮಾಡುವುದು ಸೂಕ್ತವಲ್ಲ ಎಂದು ಹೇಳಿದ ನ್ಯಾಯಾಲಯ, ಅರ್ಜಿದಾರರ ಎರಡನೇ ಕೋರಿಕೆಯನ್ನು ಮನ್ನಿಸಿ, ವೈದ್ಯಕೀಯ ಮಂಡಳಿ ಸ್ಥಾಪನೆಯ ಬಗ್ಗೆ ಕೇಂದ್ರ ಸರಕಾರದ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿಗೊಳಿಸಿದೆ.







