299 ರೂ.ಗೆ ಕೊರೋನ ಸೋಂಕು ಪರೀಕ್ಷೆ: ಪ್ರಯಾಣಿಕರಿಗೆ ಸ್ಪೈಸ್ಜೆಟ್ ಕೊಡುಗೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಮಾ.12: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ವಿಮಾನ ಯಾನ ಕ್ಷೇತ್ರಕ್ಕೆ ಮತ್ತೆ ಚೈತನ್ಯ ತುಂಬಲು ವಿಮಾನಯಾನ ಸಂಸ್ಥೆಗಳು ಹಲವು ಉಪಕ್ರಮಗಳನ್ನು ಘೋಷಿಸಿವೆ.
ಭಾರತದ ಎರಡನೇ ಬೃಹತ್ ವಿಮಾನಯಾನ ಸಂಸ್ಥೆಯಾಗಿರುವ ಸ್ಪೈಸ್ಜೆಟ್ ಸಂಸ್ಥೆ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಕೊರೋನ ಸೋಂಕು ಪರೀಕ್ಷೆ ನಡೆಸುವ ಕೊಡುಗೆ ಮುಂದಿಟ್ಟಿದೆ. ಸ್ಪೈಸ್ಜೆಟ್ ಪ್ರಯಾಣಿಕರಿಗೆ ಕೇವಲ 299 ರೂ. ದರದಲ್ಲಿ ಸೋಂಕು ಪರೀಕ್ಷೆ ನಡೆಸುವುದಾಗಿ ಸಂಸ್ಥೆ ಘೋಷಿಸಿದೆ.
ಈಗ ಆಸ್ಪತ್ರೆಗಳಲ್ಲಿ ಸೋಂಕು ಪರೀಕ್ಷೆಗೆ ವಿಧಿಸುವ ದರದ ಸುಮಾರು ಮೂರನೇ ಒಂದಂಶ ದರ ಇದಾಗಿದೆ. ಅಲ್ಲದೆ ಮುಂಬೈ ಮತ್ತು ಹೊಸದಿಲ್ಲಿಯಲ್ಲಿ ಸಂಚಾರಿ ಪರೀಕ್ಷೆ ವ್ಯವಸ್ಥೆ ರೂಪಿಸಿದ್ದು ಇಲ್ಲಿ ಜನಸಾಮಾನ್ಯರು 499 ರೂ. ದರದಿಂದ ಆರಂಭವಾಗುವ ಶುಲ್ಕಶ್ರೇಣಿಯಲ್ಲಿ ಸೋಂಕು ಪರೀಕ್ಷೆ ನಡೆಸಬಹುದಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಹಾಂಕಾಂಗ್ ಮತ್ತು ಸಿಂಗಾಪುರಕ್ಕೆ ಹೋಲಿಸಿದರೆ ಭಾರತದ ವಿಮಾನಯಾನ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಚೇತರಿಕೆಯ ಹಾದಿಯಲ್ಲಿದೆ. ಆದರೂ, ಡಿಸೆಂಬರ್ 31ಕ್ಕೆ ಅಂತ್ಯವಾಗುವ ತ್ರೈಮಾಸಿಕ ಅವಧಿಯಲ್ಲಿ ಸ್ಪೈಸ್ ಜೆಟ್ ಸಂಸ್ಥೆ 559.6 ಮಿಲಿಯನ್ ರೂ. ನಷ್ಟ ಅನುಭವಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಸ್ಥೆ 732 ಮಿಲಿಯನ್ ರೂ. ಲಾಭ ಗಳಿಸಿತ್ತು ಎಂದು ಮೂಲಗಳು ಹೇಳಿವೆ.





