ದ್ವಿಪಕ್ಷೀಯ ಸಮಸ್ಯೆಯನ್ನು ಅಂತರಾಷ್ಟ್ರೀಯ ವೇದಿಕೆಗೆ ತಂದರೆ ನೇರ ಸಂವಾದದ ಅವಕಾಶಕ್ಕೆ ಅಡ್ಡಿ: ಭಾರತ
ವಿಶ್ವಸಂಸ್ಥೆ, ಮಾ.12: ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ಶಾಂತಿ ಮತ್ತು ಭದ್ರತೆಗೆ ಹಲವು ಸವಾಲು ಎದುರಾಗಿದೆ. ಕೆಲವು ದೇಶಗಳ ಸಂಕುಚಿತ ನೀತಿ ಮತ್ತು ಅಸ್ತಿತ್ವವಾದಕ್ಕೆ ಬೆದರಿಕೆ ಎಂಬ ಕಲ್ಪನೆಯು ಹಲವು ಪ್ರದೇಶಗಳಲ್ಲಿ ಅಭದ್ರತೆ ಹೆಚ್ಚಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯ ಉಪ ಖಾಯಂ ಪ್ರತಿನಿಧಿ ಕೆ ನಾಗರಾಜ ನಾಯ್ಡು ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಂಪೂರ್ಣ ದ್ವಿಪಕ್ಷೀಯವಾಗಿರುವ ವಿಷಯಗಳನ್ನು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವೇದಿಕೆಗಳಿಗೆ ತರುವ ಮೂಲಕ ನೇರ ಮತ್ತು ಪರಸ್ಪರ ಸಂವಾದದ ಅವಕಾಶವನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ಶಾಂತಿ ಮತ್ತು ಸುರಕ್ಷತೆ ಮಾನವ ಕುಲದ ಅಭಿವೃದ್ಧಿಗೆ ಅತ್ಯಗತ್ಯವಾದ ಪೂರ್ವಾಗತ್ಯದ ಪ್ರಕ್ರಿಯೆಯಾಗಿದೆ ಮತ್ತು ಸಂಘರ್ಷವನ್ನು ತಡೆಗಟ್ಟಿ, ಶಾಂತಿ ಮತ್ತು ಭದ್ರತೆಯ ಪರಿಸ್ಥಿತಿಯನ್ನು ನಿರ್ಮಿಸುವ ನಿಟ್ಟಿನಲ್ಲಿ ಅಂತರಾಷ್ಟೀಯ ಸಮುದಾಯಕ್ಕೆ ಸಾಮೂಹಿಕ ಜವಾಬ್ದಾರಿಯಿದೆ . ದ್ವಿಪಕ್ಷೀಯ ಮಾತುಕತೆಗಳು ವಿವಾದ ಪರಿಹರಿಸಿ ಶಾಂತಿಯುತ ಒಪ್ಪಂದ ಸಾಧಿಸಲು ಸಂಬಂಧಿತ ರಾಷ್ಟ್ರಗಳು ನಡೆಸುವ ಸಂವಹನವಾಗಿದೆ.
ನಿಯಮ ಆಧಾರಿತ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಎತ್ತಿಹಿಡಿಯುವುದು, ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸುವುದು, ಕಾನೂನಿಗೆ ಬದ್ಧವಾಗಿರುವುದು, ಪಾರದರ್ಶಕ ವ್ಯವಸ್ಥೆ ಹೊಂದಿರುವುದು , ಅಂತರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ಸಮುದ್ರಯಾನದ ಸ್ವಾತಂತ್ರಕ್ಕೆ ಬದ್ಧತೆ ಹಾಗೂ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಹುಡುಕುವುದು ಅತ್ಯಂತ ಮಹತ್ವದ ಮತ್ತು ಪ್ರಾಸಂಗಿಕ(ಪ್ರಸ್ತುತ) ವಿಷಯವಾಗಿದೆ ಎಂದು ನಾಯ್ಡು ಹೇಳಿದ್ದಾರೆ.





