ದೇವಸ್ಥಾನಕ್ಕೆ ತೆರಳುತ್ತಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ

ಮಳವಳ್ಳಿ, ಮಾ.12: ಶಿವರಾತ್ರಿ ಹಬ್ಬದ ಜಾಗರಣೆಗಾಗಿ ಗ್ರಾಮದ ಸಮೀಪದ ದೇವಸ್ಥಾನಕ್ಕೆ ತೆರಳುತ್ತಿದ್ದ ರೈತ ಕಾಡಾನೆ ದಾಳಿಯಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನ ಸೊಲಬದೊಡ್ಡಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಸೊಲಬದೊಡ್ಡಿ ಗ್ರಾಮದ ಮುನಿನಂಜಯ್ಯ(63) ಆನೆ ದಾಳಿಗೆ ಸಾವನ್ನಪ್ಪಿದ ವ್ಯಕ್ತಿ. ಇವರು ರಾತ್ರಿ ಸುಮಾರು 10 ಗಂಟೆ ವೇಳೆ ಬಸವೇಶ್ವರ ದೇವಸ್ಥಾನಕ್ಕೆ ಭಜನೆಗೆ ಹೋಗುತ್ತಿದ್ದಾಗ ಆನೆ ಸೊಂಡಿಲಿನಿಂದ ಎತ್ತಿ ಬಿಸಾಡಿದಾಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಕಾವೇರಿ ವನ್ಯಜೀವಿ ಡಿಸಿಎಫ್ ಡಾ.ರಮೇಶ್, ಎಸಿಎಫ್ ಅಂಕರಾಜು, ವಲಯ ಅರಣ್ಯಾಧಿಕಾರಿ ಮಹದೇವಸ್ವಾಮಿ, ಅಸಿಫ್ ಅಹಮದ್, ಉಪವಲಯಾರಣ್ಯಾಧಿಕಾರಿ ನಂದೀಶ್, ಮಳವಳ್ಳಿ ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ಧನರಾಜ್, ಸಬ್‍ಇನ್ಸ್‍ಪೆಕ್ಟರ್ ಪುರಷೋತ್ತಮ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲು ಮಾಡಿಕೊಂಡಿದ್ದಾರೆ.
ಆಸ್ಪತ್ರೆಗೆ ಶಾಸಕ ಡಾ.ಅನ್ನದಾನಿ ಭೇಟಿ
ಆನೆ ದಾಳಿಗೆ ಸಾವನ್ನಪ್ಪಿದ ಮುನಿನಂಜಯ್ಯ ಅವರ ಮೃತ ದೇಹವನ್ನಿಟ್ಟಿದ್ದ ಮಳವಳ್ಳಿಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಡಾ.ಕೆ.ಅನ್ನದಾನಿ, ಆನೆ ದಾಳಿ ನಿಯಂತ್ರಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ನಂಜಯ್ಯ ಅವರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರದಲ್ಲಿ ತಕ್ಷಣ 2 ಲಕ್ಷ ರೂ. ಪರಿಹಾರ ದೊರೆಯಲಿದೆ ಎಂದರು.







