ಭೋಪಾಲ್, ಇಂದೋರ್ ನಲ್ಲಿ ನೈಟ್ ಕರ್ಫ್ಯೂ ಸಾಧ್ಯತೆ: ಮುಖ್ಯಮಂತ್ರಿ ಶಿವರಾಜ್ ಚೌಹಾಣ್

ಭೋಪಾಲ್: ಭೋಪಾಲ್ ಹಾಗೂ ಇಂದೋರ್ ಜಿಲ್ಲೆಗಳಲ್ಲಿ ಕೊರೋನ ವೈರಸ್ ಕೇಸ್ ಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರವಿವಾರ ಅಥವಾ ಸೋಮವಾರದಿಂದ ನೈಟ್ ಕರ್ಫ್ಯೂ ಹೇರುವ ಸಾಧ್ಯತೆಯಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೋನ ವೈರಸ್ ಪರಿಸ್ಥಿತಿಯ ಬಗ್ಗೆ ಶುಕ್ರವಾರ ಸಂಜೆ ಪರಿಶೀಲನೆ ನಡೆಸಿರುವ ಚೌಹಾಣ್ ನೈಟ್ ಕರ್ಫ್ಯೂ ವಿಧಿಸುವ ಕುರಿತು ಮಾತನಾಡಿದ್ದಾರೆ.
ಸೋಂಕಿನ ಪ್ರಕರಣಗಳು ಏರುತ್ತಿರುವುದನ್ನು ನೋಡಿದರೆ…ಇದನ್ನು ನಿಯಂತ್ರಿಸಲು ಕಠಿಣ ಕ್ರಮಗಳ ಅಗತ್ಯವಿದೆ. ರವಿವಾರ ಅಥವಾ ಸೋಮವಾರ ಭೋಪಾಲ್ ಹಾಗೂ ಇಂದೋರ್ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಹೇರುವ ಸಾಧ್ಯತೆಯಿದೆ ಎಂದು ಚೌಹಾಣ್ ಹೇಳಿದ್ದಾರೆ.
ಮಹಾರಾಷ್ಟ್ರದ ಜನತೆ ರಾಜ್ಯಕ್ಕೆ ಬರುವುದನ್ನು ನಿಯಂತ್ರಿಸುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ವೈರಸ್ ಹರಡುವುದನ್ನು ತಡೆಯಲು ಕೋವಿಡ್-19 ನಿಯಮಗಳು ಪಾಲಿಸುವ ಕುರಿತಂತೆ ದೃಢಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಚೌಹಾಣ್ ಸೂಚನೆ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಶುಕ್ರವಾರ 603 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.





