ಪ್ರಾದೇಶಿಕ ತಾರತಮ್ಯ ಹೋಗಲಾಡಿಸಲು ಸ್ಪರ್ಧೆ: ಮಹೇಶ್ ಜೋಶಿ

ಮಂಗಳೂರು, ಮಾ.13: ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಪ್ರಾದೇಶಿಕವಾರು ತಾರತಮ್ಯವಿದೆ. ಇದನ್ನು ಹೋಗಲಾಡಿಸಲು ಸಮಗ್ರ ಕರ್ನಾಟಕದ ಪ್ರತಿನಿಧಿಯಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಇಳಿದಿರುವೆ. ಮತದಾರರನ್ನು ತನ್ನ ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಡಾ.ಮಹೇಶ್ ಜೋಶಿ ಮನವಿ ಮಾಡಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನಗೆ ಅಧಿಕಾರದ ಯಾವುದೇ ಆಸೆ ಇಲ್ಲ. ವಿಸಿಟಿಂಗ್ ಕಾರ್ಡ್ ಅಧ್ಯಕ್ಷನಾಗಲು ನನಗೆ ಇಚ್ಛೆ ಇಲ್ಲ. ಕನ್ನಡ ನೆಲ, ಜಲ, ನಾಡು ನುಡಿಯ ಸೇವೆಗಾಗಿ ಸ್ಪರ್ಧೆಗೆ ಇಳಿದಿರುವೆ. ಎಡ, ಬಲ, ಮೇಲೆ, ಕೆಳಗೆ, ಮಧ್ಯಮ ಹೀಗೆ ಯಾವ ಪಂಥದವನೂ ಅಲ್ಲ, ನನ್ನದು ಏನಿದ್ದರೂ ಕನ್ನಡಯಾನದ ಪಂಥ. ಅಖಂಡ ಕರ್ನಾಟಕದ ಏಳಿಗೆಗಾಗಿ ಶ್ರಮಿಸುವುದೇ ನನ್ನ ಉದ್ದೇಶ ಎಂದು ಮಹೇಶ್ ಜೋಶಿ ಸ್ಪಷ್ಟಪಡಿಸಿದರು.
ಕಲ್ಯಾಣ ಕರ್ನಾಟಕದಲ್ಲಿ 371ನೇ ವಿಧಿಯಡಿ ಅನೇಕ ಸೌಲಭ್ಯಗಳು ಸಿಗಬೇಕಾಗಿದೆ. ಕನ್ನಡಿಗರಿಗೆ ಕನ್ನಡ, ಕನ್ನಡ ನೆಲವೇ ಅನ್ನ, ಭಾಷೆ ಆಗಬೇಕು. ಕೇಂದ್ರ ಸರಕಾರದ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲೇ ನಡೆಯುವಂತಾಗಬೇಕು. ಕನ್ನಡಕ್ಕೆ ಸಂಪೂರ್ಣ ಸಾರ್ವಭೌಮತ್ವ ಸಿಗಬೇಕು. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಾಧ್ಯಮಗಳಿಗೂ ಸ್ಥಾನಮಾನ ಸಿಗಬೇಕು. ಗಣ್ಯರು ಕನ್ನಡ ಸಾಹಿತ್ಯ ಪರಿಷತ್ತಿನ ರಾಯಭಾರಿಗಳಾಗಬೇಕು ಎಂದು ಆಶಿಸಿದ ಮಹೇಶ್ ಜೋಶಿ ಸಾಹಿತ್ಯ ಸಮ್ಮೇಳನಗಳಿಗೆ ಹೊಸ ಸ್ವರೂಪ ನೀಡಲಾಗುವುದು. ಕನ್ನಡ ಶಾಲೆ ಮುಚ್ಚದಂತೆ ಮೂಲಸೌಕರ್ಯ ಒದಗಿಸುವಂತೆ ಸರಕಾರವನ್ನು ಒತ್ತಾಯಿಸುವುದಲ್ಲದೆ ಶಾಲೆಗಳ ವಾತಾವರಣವು ಮಕ್ಕಳನ್ನು ಆಕರ್ಷಿಸುವಂತೆ ಮಾಡಬೇಕು. ಈ ಮೂಲಕ ಇಡೀ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತು ಆಗಿ ರೂಪುಗೊಳ್ಳಬೇಕು. ಈ ಬಗ್ಗೆ ಹಲವು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ರಾಜ್ಯದ 31 ಜಿಲ್ಲೆಗಳ ಪೈಕಿ ಈಗಾಗಲೇ 14 ಜಿಲ್ಲೆಗಳ ಎರಡನೇ ಹಂತದ ಪ್ರವಾಸ ಪೂರ್ತಿಗೊಳಿಸಲಾಗಿದೆ. ನನ್ನ ಈವರೆಗಿನ ಕನ್ನಡ ಕೈಂಕರ್ಯವನ್ನು ಗಮನಿಸಿ ಕನ್ನಡಿಗ ಪ್ರತಿನಿಧಿಗಳು ಬೆಂಬಲಿಸಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತುಳು ವೇದಿಕೆಯ ರವೀಂದ್ರ ಶೆಟ್ಟಿ, ಉದ್ಯಮಿ ಮಂಜುನಾಥ್ ರೇವಣ್ಕರ್ ಉಪಸ್ಥಿತರಿದ್ದರು.







