ಸಿಡಿ ಪ್ರಕರಣ: ಕ್ಲೀನ್‍ಚಿಟ್ ನೀಡುವ ಸಲುವಾಗಿ ತನಿಖೆ ನಡೆಸಲಾಗುತ್ತಿದೆ ಎಂದ ಸಂಸದ ಡಿ.ಕೆ.ಸುರೇಶ್

ಬೆಂಗಳೂರು, ಮಾ. 13: ‘ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಚನ್ನಪಟ್ಟಣ ಮೂಲದವರದ್ದೂ ಪಾತ್ರವಿದೆ. ಚನ್ನಪಟ್ಟಣದವರಿಗೆ ಅಧಿಕಾರದ ಮೇಲೆ ಆಸೆ ಇತ್ತಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಅವರದ್ದು ಭಾಗಿದಾರಿಕೆ ಇದೆ' ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕನಕಪುರದವರದ್ದು ಆಸೆಯಿದ್ದ ಮೇಲೆ, ಚನ್ನಪಟ್ಟಣದವರದ್ದು ಇರಲ್ವಾ? ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಜೊತೆಯಲ್ಲಿದ್ದವರು. ಜೊತೆಯಲ್ಲಿದ್ದವರು ಅದನ್ನ ನೋಡಲು ಸಾಧ್ಯ. ಬೇರೆಯವರಿಂದ ಹೇಗೆ ಸಾಧ್ಯ? ಹೀಗಾಗಿ ಅವರ ಜೊತೆಯಲ್ಲಿದ್ದವರು ಚನ್ನಪಟ್ಟಣದವರು ಅಲ್ವಾ, ಅವರನ್ನೇ ಕೇಳಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮರುಪ್ರಶ್ನೆ ಹಾಕಿದರು.
ಸಿಡಿ ಪ್ರಕರಣದಲ್ಲಿ ಎಸ್‍ಐಟಿ ತನಿಖೆ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನ ನಾನು ನೋಡಿದ್ದೇನೆ. ಈ ಪ್ರಕರಣವನ್ನ ಎಸ್‍ಐಟಿಗೆ ವಹಿಸಿದ್ದಾರೆ. ಆದರೆ ಎಫ್‍ಐಆರ್ ಇಲ್ಲ. ಹೀಗಾಗಿ ಈ ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ. ಕ್ಲೀನ್‍ಚಿಟ್ ನೀಡುವ ಸಲುವಾಗಿ ತನಿಖೆ ನಡೆಸಲಾಗುತ್ತಿದೆ. ಇವರಿಗೆ ತನಿಖೆ ಉದ್ದೇಶವಿದ್ದರೆ ಕೂಡಲೇ ಎಫ್‍ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.





