ಹುಲಿ ದಾಳಿಗೆ ಮತ್ತೊಂದು ಹಸು ಬಲಿ: ಪ್ರತಿಭಟನೆ ತೀವ್ರ, ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ

ಮಡಿಕೇರಿ, ಮಾ.13: ಮೂರು ಮಾನವ ಜೀವ ಬಲಿ ಪಡೆದ ಹುಲಿ ಸೆರೆ ಕಾರ್ಯಾಚರಣೆ ವಿಫಲವಾಗುತ್ತಿರುವ ಬೆನ್ನಲ್ಲೇ ವ್ಯಾಘ್ರನ ದಾಳಿಗೆ ಹಸುಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇದೆ.
ಶ್ರೀಮಂಗಲ ಹೋಬಳಿ ನೆಮ್ಮಲೆ ಗ್ರಾಮದ ಮಾಣಿರ ಪೂಣಚ್ಚ ಅವರಿಗೆ ಸೇರಿದ ಹಸುವನ್ನು ಹುಲಿಯೊಂದು ಕೊಂದು ಹಾಕಿದ್ದು, ದೇಹದ ಬಹುಭಾಗವನ್ನು ತಿಂದು ಹಾಕಿದೆ. ಕಟ್ಟಿ ಹಾಕಿದ್ದ ಹಸು ಕಳೆದ ಎರಡು, ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಹುಡುಕುತ್ತಿದ್ದಾಗ ಶನಿವಾರ ಕಳೇಬರ ಕಂಡು ಬಂದಿದೆ.
ಪ್ರತಿಭಟನೆ ತೀವ್ರ
ಅತ್ತ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಫಲಪ್ರದವಾಗುತ್ತಿಲ್ಲ. ಇತ್ತ ಹುಲಿಯ ಹಾವಳಿಯೂ ಕಡಿಮೆಯಾಗಿಲ್ಲ. ಇದರಿಂದ ಬೇಸತ್ತಿರುವ ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯ ರೈತರು ಹಾಗೂ ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆಯಲಾರಂಭಿಸಿದೆ. ಹುಲಿಯನ್ನು ಸೆರೆ ಹಿಡಿಯವಂತೆ ಇಲ್ಲವೇ ಗುಂಡಿಕ್ಕುವಂತೆ ಒತ್ತಾಯಿಸಿ ಬುಧವಾರ ಮತ್ತಿಗೋಡುವಿನಲ್ಲಿರುವ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದ ವಿವಿಧ ಸಂಘಟನೆಗಳ ಪ್ರಮುಖರು ಅರಣ್ಯ ಇಲಾಖೆಗೆ ನೀಡಿದ್ದ 48 ಗಂಟೆಗಳ ಗಡುವು ಶುಕ್ರವಾರ ಸಂಜೆಗೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಬೆಳ್ಳೂರು ಗ್ರಾಮದಲ್ಲಿ ನಡೆಯುತ್ತಿರುವ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹವೂ ಮುಂದುವರಿದಿದೆ.
ಇದೀಗ ಹುಲಿ ದಾಳಿಗೆ ಮತ್ತೆ ಎರಡು ಜಾನುವಾರುಗಳು ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ಗುಂಡಿಕ್ಕಿ ಸಾಯಿಸಬೇಕೆಂಬ ಒತ್ತಾಯ ಬಲವಾಗುತ್ತಿದೆ. ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಶನಿವಾರ ನಡೆದ ಪ್ರತಿಭಟನೆಯಲ್ಲಿ ಶ್ರೀಮಂಗಲದ ಕೊಡವ ಸಮಾಜದ ಸದಸ್ಯರು, ಶಾಲಾ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು. ರವಿವಾರ ಕೂಡ ವಿವಿಧ ಗ್ರಾಮಗಳ ಗ್ರಾಮಸ್ಥರ ಜೊತೆಗೆ ಬಿರುನಾಣಿಯ ರೈತರು, ಸಾರ್ವಜನಿಕರು, ಬೆಳೆಗಾರರು, ವರ್ತಕರು ಹಾಗೂ ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಡಿಸಿ ಕಚೇರಿಗೆ ಮುತ್ತಿಗೆ
ಹುಲಿಯ ಅಟ್ಟಹಾಸ ನಿಗ್ರಹಕ್ಕೆ ಅರಣ್ಯ ಇಲಾಖೆ ಮುಂದಿನ 24 ಗಂಟೆಗಳಲ್ಲಿ ವಿಫಲವಾದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.








