ಮೊದಲ ಟ್ವೆಂಟಿ-20 ಪಂದ್ಯಕ್ಕೆ ರೋಹಿತ್ ಗೆ ವಿಶ್ರಾಂತಿ ನಿರ್ಧಾರ ಪ್ರಶ್ನಿಸಿದ ವೀರೇಂದ್ರ ಸೆಹ್ವಾಗ್
''ಈ ನಿಯಮ ನಾಯಕ ವಿರಾಟ್ ಕೊಹ್ಲಿಗೂ ಅನ್ವಯಿಸುತ್ತದೆಯೇ?''

ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಿದ ಭಾರತದ ನಿರ್ಧಾರವನ್ನು ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಪ್ರಶ್ನಿಸಿದ್ದಾರೆ. ಈ ನಿಯಮವು ಭಾರತದ ನಾಯಕ ವಿರಾಟ್ ಕೊಹ್ಲಿಗೂ ಅನ್ವಯಿಸುತ್ತದೆಯೇ ಎಂದು ಕೇಳಿದ್ದಾರೆ.
ರೋಹಿತ್ ಗಾಯದಿಂದ ಚೇತರಿಸಿಕೊಂಡು ಆಸ್ಟ್ರೇಲಿಯದಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ವೇಳೆ ತಂಡಕ್ಕೆ ವಾಪಸಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಗೆ ವಿಶ್ರಾಂತಿ ನೀಡಿರುವ ನಿರ್ಧಾರವು ಎಲ್ಲರಿಗೂ ಅಚ್ಚರಿವುಂಟು ಮಾಡಿದೆ.
ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ, 5 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ದೃಢಪಡಿಸಿದ್ದರು. ಆದರೆ ಟಾಸ್ ವೇಳೆ ಮಾತನಾಡಿದ ಕೊಹ್ಲಿ, ರೋಹಿತ್ ಗೆ ಇನ್ನು ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ನೀಡಲಾಗುವುದು ಎಂದಿದ್ದರು.
ಫಾರ್ಮ್ ನಲ್ಲಿದ್ದ ರೋಹಿತ್ ಅನುಪಸ್ಥಿತಿಯಲ್ಲಿ ಭಾರತವು ಬ್ಯಾಟಿಂಗ್ ನಲ್ಲಿ ಪರದಾಟ ನಡೆಸಿತ್ತು. ಪವರ್ ಪ್ಲೇ ನಲ್ಲಿ ಎರಡನೇ ಕನಿಷ್ಠ ಸ್ಕೋರ್ ಗಳಿಸಿತ್ತು. ಶ್ರೇಯಸ್ ಅಯ್ಯರ್ ಜೀವನಶ್ರೇಷ್ಠ ಸ್ಕೋರ್ (67)ಗಳಿಸಿದ್ದ ಹೊರತಾಗಿಯೂ ಭಾರತವು ನಿಗದಿತ 20 ಓವರ್ ಗಳಲ್ಲಿ ಕೇವಲ 124 ರನ್ ಗಳಿಸಲು ಶಕ್ತವಾಗಿತ್ತು. ಇಂಗ್ಲೆಂಡ್ 16.3 ಓವರ್ ಗಳಲ್ಲಿ ಗುರಿ ತಲುಪಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿತ್ತು.
ಗಮನಾರ್ಹ ವಿಚಾರವೆಂದರೆ ರೋಹಿತ್ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದರು. ಸರಣಿಯಲ್ಲಿ ಶತಕ ಸಹಿತ ಒಟ್ಟು 345 ರನ್ ಗಳಿಸಿದ್ದರು.
ರೋಹಿತ್ ಶರ್ಮಾ ಕೆಲವು ಪಂದ್ಯಗಳಲ್ಲಿ ಆಡದೇ ಇರುವ ಮೂಲಕ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಹಾಗಾದರೆ ಈ ನಿಯಮ ವಿರಾಟ್ ಕೊಹ್ಲಿಗೂ ಅನ್ವಯವಾಗುತ್ತದೆಯೇ ಎನ್ನುವುದು ನನ್ನ ಪ್ರಶ್ನೆ. ನಾಯಕ ಕೊಹ್ಲಿ ವಿಶ್ರಾಂತಿ ತೆಗೆದುಕೊಂಡ ಯಾವುದೇ ಸಮಯ ನನಗೆ ನೆನಪಿಲ್ಲ. ನಾಯಕ ವಿರಾಮ ತೆಗೆದುಕೊಳ್ಳದಿದ್ದರೆ ಅವರು ಇತರರಿಗೆ ಹೇಗೆ ವಿರಾಮ ನೀಡುತ್ತಿದ್ದಾರೆ ಎಂದು ಸೆಹ್ವಾಗ್ ಪ್ರಶ್ನಿಸಿದರು.







