ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಬೆಂಗಳೂರು, ಮಾ.13: ಮಹಿಳೆಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮಚಂದ್ರಾಪುರದ ವನಜಾಕ್ಷಿ(25) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆಗೈದು ಪತಿ ಪರಾರಿಯಾಗಿದ್ದಾನೆ ಎಂದು ವನಜಾಕ್ಷಿ ಪೊಷಕರು ಆರೋಪಿಸಿದ್ದಾರೆ. ವನಜಾಕ್ಷಿಗೆ 8 ತಿಂಗಳ ಹಿಂದೆ ನಾಗರಾಜ್ ಎಂಬುವರ ಜತೆ ವಿವಾಹಮಾಡಿ ಕೊಡಲಾಗಿದ್ದು, ನಾಗಮಂಗಲದ ಮೂಲದ ದಂಪತಿ ರಾಮಚಂದ್ರಪುರದಲ್ಲಿ ಬೇಕರಿ ನಡೆಸುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಬೇಕರಿ ವ್ಯಾಪಾರದಲ್ಲಿ ನಷ್ಟವಾಗಿತ್ತು. ಹೀಗಾಗಿ ಪತ್ನಿಗೆ ಹಣ ತರುವಂತೆ ನಾಗರಾಜ್ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ತವರು ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆ ಎಂದು ವನಜಾಕ್ಷಿ ಹೇಳಿದ್ದು ಹಣದ ವಿಚಾರವಾಗಿಯೇ ಪತಿ-ಪತ್ನಿ ಮಧ್ಯೆ ಕಳೆದ 6 ತಿಂಗಳಿಂದ ಕಿತ್ತಾಟ ನಡೆದಿತ್ತು. ಈ ಮಧ್ಯೆ ಶುಕ್ರವಾರ ವನಜಾಕ್ಷಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತಿಯೇ ಕೊಲೆಗೈದು ನೇಣು ಹಾಕಿಕೊಂಡಿರುವ ರೀತಿಯಲ್ಲಿ ಬಿಂಬಿಸಿದ್ದಾನೆಂದು ವನಜಾಕ್ಷಿ ಪಾಲಕರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆ ಬಳಿಕ ಪತಿ ನಾಗರಾಜ್ ಪರಾರಿಯಾಗಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







