ಮಾ. 15: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಉಪವಾಸ ಸತ್ಯಾಗ್ರಹ
ಎಲ್ಲಾ ಸರ್ವೆ ಕಾರ್ಯ ಬಹಿಷ್ಕರಿಸಲು ನಿರ್ಧಾರ

ಉಡುಪಿ, ಮಾ.13: ಅಂಗನವಾಡಿ ನೌಕರರಿಗೆ ಸೇವಾ ಜೇಷ್ಠತೆಯ ಆಧಾರದಲ್ಲಿ ಗೌರವ ಧನ ಹೆಚ್ಚಳವು ಸೇರಿದಂತೆ ತಮ್ಮ ಬಹುಕಾಲದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಅಂಗನವಾಡಿ ನೌಕರು ಕರ್ನಾಟಕ ರಾಜ್ಯ ಅಂಗನ ವಾಡಿ ನೌಕರರ ಸಂಘ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಾ.15ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವುದಾಗಿ ಸಂಘದ ಅಧ್ಯಕ್ಷೆ ಭಾರತಿ ಹಾಗೂ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.15ರಂದು ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಒಂದು ದಿನದ ಈ ಧರಣಿ ಸತ್ಯಾಗ್ರಹ ನಡೆಸಲು ಸಂಘಟನೆ ನಿರ್ಧರಿಸಿದೆ ಎಂದರು.
ಮಾತ್ರವಲ್ಲದೇ ನಾಳೆಯಿಂದ ನಮ್ಮ ಮೇಲೆ ಹೇರುವ ಹೆಚ್ಚುವರಿ ಕೆಲಸಗಳಾದ ಇ-ಸರ್ವೆ, ಆರ್‌ಡಿಪಿಆರ್‌ನಿಂದ ಕೊಟ್ಟಿರುವ ಸರ್ವೆ, ಬಿಪಿಎಲ್ ಕಾರ್ಡ್ ಆರ್‌ಸಿಎಚ್ ಸರ್ವೆ, ಭಾಗ್ಯಲಕ್ಷ್ಮೀ, ಮಾತೃವಂದನ, ಮಾತೃಶ್ರೀ, ಸ್ತ್ರೀಶಕ್ತಿ, ಚುನಾವಣೆ ಮುಂತಾದ ಕೆಲಸಗಳನ್ನು ಬಹಿಷ್ಕರಿಸಲು ಸಹ ಸಂಘಟನೆ ಕರೆ ಕೊಟ್ಟಿದೆ ಎಂದು ಸುಶೀಲಾ ನಾಡ ತಿಳಿಸಿದರು.
ಮಾತ್ರವಲ್ಲ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯನ್ನು ಕೊಡುವ ತನಕ ಅಡುಗೆ ಮಾಡದಿರುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ ಎಂದವರು ಹೇಳಿದರು.
ಕೋವಿಡ್ ಸಮಯದಲ್ಲಿ ಅಂಗನವಾಡಿ ನೌಕರರು ಯಾವುದೇ ಸವಲತ್ತುಗಳಿಲ್ಲದಿದ್ದರೂ ಸರಕಾರ ನೀಡಿದ ಸೂಚನೆಗಳಂತೆ ಕೆಲಸ ನಿರ್ವಹಿಸಿದ್ದಾರೆ. ಇದರಿಂದ ಕೆಲಸದ ಒತ್ತಡದಿಂದ 35 ಮಂದಿ ಹಾಗೂ ಕೊರೋನಾದಿಂದಾಗಿ 26 ಮಂದಿ ಕೊರೋನಕ್ಕೆ ಬಲಿಯಾಗಿದ್ದಾರೆ. ಆದರೆ ಇದಕ್ಕಾಗಿ ಯಾವುದೇ ಪ್ರತಿಫಲ ಸಿಕ್ಕಿಲ್ಲ ಎಂದವರು ನುಡಿದರು.
ಅಂಗನವಾಡಿ ನೌಕರರ ಹಲವು ಹಂತದ ಹೋರಾಟದ ಕಾರಣದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ನೌಕರರ ವಿವಿಧ ಸವಲತ್ತುಗಳಿಗಾಗಿ ಒಟ್ಟು 339.48 ಕೋಟಿ ರೂ.ಮೊತ್ತದ ಶಿಫಾರಸ್ಸನ್ನು ಬಜೆಟ್ ಸಂದರ್ಭದಲ್ಲಿ ಸರಕಾರಕ್ಕೆ ಮಂಡಿಸಿತ್ತು. ಇದರಿಂದ 1.30 ಲಕ್ಷ ಕುಟುಂಬಗಳಿಗೆ ಸಹಾಯವಾಗುತ್ತಿತ್ತು.
ಆದರೆ ರಾಜ್ಯ ಬಜೆಟ್‌ನಲ್ಲಿ ಮೂರು ಶಿಫಾರಸ್ಸುಗಳಲ್ಲಿ ಯಾವುದನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದ ಸುಶೀಲಾ ನಾಡಾ, ನಮ್ಮ ಇಲಾಖೆಯ ಶಿಫಾರಸ್ಸುಗಳನ್ನು ಬಜೆಟ್ ಅಂತಿಮಗೊಳಿಸುವಾಗ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಸಂಘಟನೆ ಮಾ.15ರ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಲೀಲಾ ಕಾಪು, ಗೀತಾ ಕಾಪು, ಅಂಬಿಕಾ ಉಪಸ್ಥಿತರಿದ್ದರು.







