ಸಫೂರಾ ಝರ್ಗರ್ ಬಂಧನಕ್ಕೆ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಖಂಡನೆ

ವಿಶ್ವಸಂಸ್ಥೆ, ಮಾ.13: ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣ ಹಾಗೂ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ 2020ರ ಎಪ್ರಿಲ್‌ನಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿನಿ ಸಫೂರಾ ಝರ್ಗರ್ (ಆಗ ಗರ್ಭಿಣಿಯಾಗಿದ್ದರು) ಬಂಧನವನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ ಅನಿಯಂತ್ರಿತ ಬಂಧನಗಳ ವಿರುದ್ಧ ಕಾರ್ಯನಿರ್ವಹಿಸುವ ತಂಡ (ಡಬ್ಯ್ಲುಜಿಎಡಿ) ಖಂಡಿಸಿದೆ ಎಂದು ವರದಿ ತಿಳಿಸಿದೆ. ಅಲ್ಲದೆ ಸರಕಾರದ ಉಪಕ್ರಮವನ್ನು ಟೀಕಿಸುವ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಣಯವನ್ನು ಮೂವರು ವಿಶೇಷ ಪ್ರತಿನಿಧಿಗಳ ಸಮಿತಿಗೆ ವಹಿಸಿದೆ ಎಂದು ವರದಿಯಾಗಿದೆ.
ಮಾನವ ಹಕ್ಕುಗಳ ಸಮಿತಿಯ ಪ್ರತಿನಿಧಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಅಂಗೀಕರಿಸುವ ನಿರ್ಣಯದ ಪ್ರಕಾರ’ ಸಾರ್ವತ್ರಿಕ ಮಾನ್ಯಮಾಡಲಾಗಿರುವ ಮತ್ತು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಹಲವು ಕಲಂಗಳಲ್ಲಿ ಉಲ್ಲೇಖಿಸಿರುವ ಮಾನವ ಹಕ್ಕುಗಳು, ಅದರಲ್ಲೂ ನಿರ್ದಿಷ್ಟವಾಗಿ ಅಭಿವ್ಯಕ್ತಿ ಸ್ವಾತಂತ್ರ, ಅಭಿಮತ ಸ್ವಾತಂತ್ರ, ಶಾಂತರೀತಿಯಲ್ಲಿ ಸಭೆ ಸೇರುವ ಹಕ್ಕನ್ನು ಸಫೂರಾರಿಗೆ ನಿರಾಕರಿಸಲಾಗಿದೆ. ಈ ಪ್ರಕರಣದ ಬಗ್ಗೆ ಸರಕಾರ ಸಂಪೂರ್ಣ ಮತ್ತು ಸ್ವತಂತ್ರ ರೀತಿಯ ತನಿಖೆ ನಡೆಸಬೇಕು ಮತ್ತು ಗರ್ಭಿಣಿಯಾಗಿದ್ದರೂ ಸಫೂರಾರನ್ನು ಅಕ್ರಮವಾಗಿ ಬಂಧಿಸಿಸುವ ಮೂಲಕ ಅವರ ಹಕ್ಕನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಖಾಲಿ ಪೇಪರ್ ಹಾಳೆಗೆ ಸಹಿ ಹಾಕುವಂತೆ ತನ್ನನ್ನು ಬಲವಂತ ಪಡಿಸಲಾಗಿದೆ ಎಂಬ ಅವರ ಹೇಳಿಕೆ, ಅವರನ್ನು ಬಂಧನದಲ್ಲಿಟ್ಟ ಪರಿಸ್ಥಿತಿ ಮತ್ತು ಜೈಲಿನಲ್ಲಿ ತನ್ನ ವಿರುದ್ಧ ಪಕ್ಷಪಾತದ ಧೋರಣೆ ತೋರಿದ್ದಾರೆ ಮತ್ತು ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿರುವುದನ್ನು ಸಫೂರಾ ಟೀಕಿಸಿದ್ದರು ಮತ್ತು ಮಾನವಹಕ್ಕುಗಳ ಮಹಿಳಾ ಕಾರ್ಯಕರ್ತೆಯಾಗಿ ಈ ಕಾಯ್ದೆಯ ವಿರುದ್ಧ ಸಾರ್ವಜನಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ, ಜಾಮಿಯಾ ಸಮನ್ವಯ ಸಮಿತಿಯ ಮಾಧ್ಯಮ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಅವರನ್ನು ಬಂಧಿಸಿರುವುದು ಪ್ರತಿರೋಧವನ್ನು ಹತ್ತಿಕ್ಕುವ ಕ್ರಮವಾಗಿದೆ ಎಂದು 2020ರ ನವೆಂಬರ್ 27ರಂದು ಅಂಗೀಕರಿಸಲಾದ ನಿರ್ಣಯದಲ್ಲಿ ಉಲ್ಲೇಖಿಸಿದ್ದು ಈ ನಿರ್ಣಯವನ್ನು ಗುರುವಾರ (ಮಾರ್ಚ್ 11) ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರಕ್ಕೆ ಉತ್ತೇಜನ ಮತ್ತು ರಕ್ಷಣೆ ನೀಡುವ, ಮಾನವ ಹಕ್ಕು ಹೋರಾಟಗಾರರು ಎದುರಿಸುತ್ತಿರುವ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲು ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸುವ ಸಂದರ್ಭ ಮಾನವಹಕ್ಕು ಹಾಗೂ ಮೂಲಭೂತ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಪ್ರಕರಣವನ್ನು ವಿಶೇಷ ಪ್ರತಿನಿಧಿಗಳ ತಂಡಕ್ಕೆ ವಹಿಸಲಾಗಿದೆ ಎಂದು ನಿರ್ಣಯ ಹೇಳಿದೆ.
ಈ ಕುರಿತು ತಾನು ಭಾರತ ಸರಕಾರಕ್ಕೆ 2020ರ ಜುಲೈ 22ರಂದು ಪತ್ರ ಬರೆದಿದ್ದು, ಝರ್ಗರ್ ಪ್ರಕರಣದ ಬಗ್ಗೆ 3 ತಿಂಗಳೊಳಗೆ ಮಾಹಿತಿ ನೀಡುವಂತೆ ಕೋರಿದ್ದೆ. ಆದರೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಕಳೆದ ತಿಂಗಳು ಬ್ರಿಟಿಷ್ ಉದ್ಯಮಿ ಕ್ರಿಶ್ಚಿಯನ್ ಮೈಕೆಲ್‌ರನ್ನು ಭಾರತದಲ್ಲಿ ಬಂಧಿಸಿರುವ ವಿಷಯದಲ್ಲಿ ಡಬ್ಯ್ಲುಜಿಎಡಿ ಆಕ್ಷೇಪಿಸಿದಾಗ ಭಾರತದ ವಿದೇಶ ವ್ಯವಹಾರ ಇಲಾಖೆ ತೀವ್ರವಾಗಿ ಪ್ರತಿಕ್ರಿಯೆ ನೀಡಿತ್ತು. ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ದೂರುಗಳ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಲು ಭಾರತವು ಸಶಕ್ತ ವ್ಯವಸ್ಥೆ ಹೊಂದಿದೆ ಎಂದು ಡಬ್ಯ್ಲುಜಿಎಡಿ ಗಮನಿಸಬೇಕು ಎಂದು ವಿದೇಶ ವ್ಯವಹಾರ ಇಲಾಖೆ ಪ್ರತಿಕ್ರಿಯಿಸಿತ್ತು.
ಈ ವಿಷಯದಲ್ಲಿ ಆಂತರಿಕ ಕಾನೂನು ಪ್ರಕ್ರಿಯೆ ಈಗ ಜಾರಿಯಲ್ಲಿರುವುದರಿಂದ ಭಾರತಕ್ಕೆ ತನ್ನನ್ನು ಸಮರ್ಥಿಸಿಕೊಳ್ಳಲು ಅವಕಾಶವಿದೆ. ಆದರೆ ಇದರಿಂದ ಭಾರತದ ಗೌರವ, ಪ್ರತಿಷ್ಟೆಗೆ ಹಾನಿಯಾಗಲಿದೆ. 2022ರಲ್ಲಿ ನಡೆಯುವ ಮಾನವ ಹಕ್ಕುಗಳ ಸಮಿತಿ ಸಭೆಯಲ್ಲಿ ಸಾರ್ವತ್ರಿಕ ಆವರ್ತಕ ವಿಮರ್ಶೆಯ ಸಂದರ್ಭ ಭಾರತದ ಮಾನವಹಕ್ಕು ಪ್ರಕರಣಗಳ ಕುರಿತ ಚರ್ಚೆಯನ್ನು ಕೈಗೆತ್ತಿಕೊಳ್ಳಬಹುದು ಎಂದು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸುವ ತಜ್ಞ ನ್ಯಾಯವಾದಿ ಅವಿ ಸಿಂಗ್ ಹೇಳಿರುವುದಾಗಿ ‘ದಿ ಹಿಂದು’ ವರದಿ ಮಾಡಿದೆ.
ಸಫೂರಾ ಜಾಮೀನು ಅರ್ಜಿ ವಿರೋಧಿಸಿದ್ದ ಪೊಲೀಸರು
ಗರ್ಭಿಣಿಯಾಗಿದ್ದ ಸಫೂರಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಪೊಲೀಸರು ವಿರೋಧಿಸಿದ್ದರು. ‘ಹಿಂಸಾಚಾರದ ಮಾರ್ಗದ ಮೂಲಕ ಭಾರತ ಸರಕಾರವನ್ನು ಬುಡಮೇಲುಗೊಳಿಸುವ ಉದ್ದೇಶದಿಂದ’ 2020ರ ಫೆಬ್ರವರಿಯಲ್ಲಿ ನಡೆದಿದ್ದ ದಿಲ್ಲಿ ಹಿಂಸಾಚಾರದ ಮುಖ್ಯ ಪಿತೂರಿಗಾರರಲ್ಲಿ ಮತ್ತು ಹಿಂಸೆಗೆ ಪ್ರಚೋದನೆ ನೀಡಿದವರಲ್ಲಿ ಸಫೂರಾ ಪ್ರಮುಖರಾಗಿದ್ದಾರೆ ಎಂದು ಪೊಲೀಸರು ವಾದಿಸಿದ್ದರು. ಆದರೆ ಮಾನವೀಯತೆಯ ಆಧಾರದಲ್ಲಿ ಹೈಕೋರ್ಟ್ 2020ರ ಜೂನ್‌ನಲ್ಲಿ ಸಫೂರಾಗೆ ಜಾಮೀನು ನೀಡಿ ಬಿಡುಗಡೆಗೊಳಿಸಿತ್ತು.







