6ಕ್ಕೂ ಅಧಿಕ ಕೊರೋನಾ ಲಸಿಕೆ ಭಾರತಕ್ಕೆ ಬರಲಿದೆ: ಸಚಿವ ಹರ್ಷವರ್ಧನ್
ಹೊಸದಿಲ್ಲಿ, ಮಾ. 13: ಭಾರತಕ್ಕೆ 6ಕ್ಕೂ ಅಧಿಕ ಕೊರೋನ ಲಸಿಕೆಗಳು ಬರಲಿವೆ ಎಂದು ಶನಿವಾರ ಘೋಷಿಸಿರುವ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್, ಇದುವರೆಗೆ 1.84 ಕೋಟಿ ಜನರಿಗೆ ಕೊರೋನ ಲಸಿಕೆ ಹಾಕಲಾಗಿದೆ.
23 ಕೋಟಿ ಪರೀಕ್ಷೆ ನಡೆಸಲಾಗಿದೆ ಎಂದಿದ್ದಾರೆ. ಪರಿಸರ ಆರೋಗ್ಯದ ಕುರಿತ ಸಂಶೋಧನೆಯ ರಾಷ್ಟ್ರೀಯ ತನಿಖಾ ಸಂಸ್ಥೆಯ ನೂತನ ಹಸಿರು ಕ್ಯಾಂಪಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ‘‘ಭಾರತ ಎರಡು ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆ. ಅದನ್ನು 71 ರಾಷ್ಟ್ರಗಳಿಗೆ ನೀಡಲಾಗಿದೆ. ಅವುಗಳು ಇನ್ನಷ್ಟು ಲಸಿಕೆಗೆ ಬೇಡಿಕೆ ಇರಿಸಿವೆ. ಕೆನಡಾ, ಬ್ರೆಝಿಲ್ ಹಾಗೂ ಇತರ ಅಭಿವೃದ್ಧಿ ಹೊಂದಿದ ದೇಶಗಳು ಭಾರತದ ಲಸಿಕೆಗಳನ್ನು ಬಳಸುತ್ತಿವೆ’’ ಎಂದು ಅವರು ಹೇಳಿದ್ದಾರೆ.
‘‘6ಕ್ಕೂ ಅಧಿಕ ಲಸಿಕೆಗಳು ಭಾರತಕ್ಕೆ ಬರಲಿವೆ. ಶನಿವಾರ ಬೆಳಗ್ಗೆ ವರೆಗೆ ದೇಶದಲ್ಲಿ 1.84 ಕೋಟಿ ಲಸಿಕೆ ನೀಡಲಾಗಿದೆ. ನಿನ್ನೆ 20 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ’’ ಎಂದು ಸಚಿವರು ಹೇಳಿದ್ದಾರೆ. ಭಾರತವನ್ನು ‘ವಿಶ್ವಗುರು’ವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದ್ದಾರೆ. ವಿಜ್ಞಾನಕ್ಕೆ ಗೌರವ ನೀಡಿ. ಲಸಿಕೆಯ ಕುರಿತ ರಾಜಕೀಯವನ್ನು ಅಂತ್ಯಗೊಳಿಸುವ ಅಗತ್ಯ ಇದೆ. ಇದು ವೈಜ್ಞಾನಿಕ ಹೋರಾಟವೇ ಹೊರತು, ರಾಜಕೀಯ ಹೋರಾಟವಲ್ಲ ಎಂದು ವರ್ಧನ್ ಹೇಳಿದ್ದಾರೆ.







