ಮ್ಯಾನ್ಮಾರ್ ರಾಷ್ಟ್ರೀಯರಿಗೆ ತಾತ್ಕಾಲಿಕ ಆಶ್ರಯ ನೀಡುತ್ತೇವೆ: ಅಮೆರಿಕ

ವಾಶಿಂಗ್ಟನ್, ಮಾ. 13: ಮ್ಯಾನ್ಮಾರ್‌ನಲ್ಲಿ ಸೇನಾ ಕ್ಷಿಪ್ರ ಕ್ರಾಂತಿಯ ಬಳಿಕ ನಡೆಯುತ್ತಿರುವ ಹಿಂಸೆಯ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಸಿಕ್ಕಿಹಾಕಿಕೊಂಡಿರುವ ಆ ದೇಶದ ಪ್ರಜೆಗಳು ‘ತಾತ್ಕಾಲಿಕ ರಕ್ಷಣೆ ಕಾರ್ಯಕ್ರಮ’ದಡಿಯಲ್ಲಿ ಅಮೆರಿಕದಲ್ಲಿ ಉಳಿಯಬಹುದು ಎಂದು ಅವೆುರಿಕ ಸರಕಾರ ಶುಕ್ರವಾರ ಹೇಳಿದೆ.
‘‘ಸೇನಾ ಕ್ಷಿಪ್ರಕ್ರಾಂತಿ ಮತ್ತು ನಾಗರಿಕರ ವಿರುದ್ಧ ಭದ್ರತಾ ಪಡೆಗಳು ನಡೆಸುತ್ತಿರುವ ಅಮಾನುಷ ಹಿಂಸಾಚಾರದಿಂದಾಗಿ ಬರ್ಮ (ಮ್ಯಾನ್ಮಾರ್)ದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆ ದೇಶದ ಹೆಚ್ಚಿನ ಭಾಗಗಳಲ್ಲಿ ಮಾನವೀಯ ಬಿಕ್ಕಟ್ಟು ನೆಲೆಸಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ’’ ಎಂದು ಅಮೆರಿಕದ ಆಂತರಿಕ ಭದ್ರತಾ ಕಾರ್ಯದರ್ಶಿ ಅಲೆಜಾಂಡ್ರೊ ಮಯೊರ್ಕಸ್ ಹೇಳಿದ್ದಾರೆ.
‘‘ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬರ್ಮದ ಜನರಿಗೆ ತಾತ್ಕಾಲಿಕ ರಕ್ಷಣೆ ನೀಡುವ ಕಾರ್ಯಕ್ರಮಕ್ಕೆ ನಾನು ಚಾಲನೆ ನೀಡಿದ್ದೇನೆ. ಈ ಕಾರ್ಯಕ್ರಮದಡಿಯಲ್ಲಿ ಬರ್ಮ ರಾಷ್ಟ್ರೀಯರು ಮತ್ತು ಅಲ್ಲಿನ ನಿವಾಸಿಗಳು ಅಮೆರಿಕದಲ್ಲಿ ತಾತ್ಕಾಲಿಕವಾಗಿ ಉಳಿಯಬಹುದಾಗಿದೆ’’ ಎಂದು ಅವರು ತಿಳಿಸಿದರು.





