ಕೇಂದ್ರ ಸರಕಾರ ರಚಿಸಿದ್ದ ‘ವಾಯು ಗುಣಮಟ್ಟ ನಿರ್ವಹಣಾ ಆಯೋಗ’ ಐದು ತಿಂಗಳಲ್ಲಿ ಬಂದ್
ಹೊಸದಿಲ್ಲಿ, ಮಾ. 13: ರಾಷ್ಟ್ರ ರಾಜಧಾನಿ ವಲಯ ಹಾಗೂ ನೆರೆಯ ಪ್ರದೇಶಗಳಲ್ಲಿ ಕೇಂದ್ರ ಸರಕಾರ ರಚಿಸಿದ ವಾಯು ಗುಣಮಟ್ಟ ನಿರ್ವಹಣಾ ಆಯೋಗ ಐದು ತಿಂಗಳಲ್ಲೇ ರದ್ದುಗೊಂಡಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸರಕಾರ ಈ ಆಯೋಗವನ್ನು ಸ್ಥಾಪಿಸಿತ್ತು.
ಅಧ್ಯಾದೇಶದ ಮಂಡನೆಯ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಈ ಆಯೋಗವನ್ನು ರದ್ದುಗೊಳಿಸಲಾಗಿದೆ. ಸಂಸತ್ತು ಸಮಾವೇಶಗೊಂಡ ಆರು ವಾರಗಳ ಒಳಗೆ ಅಧ್ಯಾದೇಶವನ್ನು ಮಂಡಿಸದೇ ಇದ್ದರೆ, ಅದು ಅನೂರ್ಜಿತಗೊಳ್ಳುತ್ತದೆ ಹಾಗೂ ಆಯೋಗ ರದ್ದಾಗುತ್ತದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಆರ್.ಪಿ. ಗುಪ್ತಾ ಹೇಳಿದ್ದಾರೆ. ಸಂಸತ್ತು ಆರಂಭವಾದ ಆರು ವಾರಗಳ ಒಳಗೆ ಅಧ್ಯಾದೇಶವನ್ನು ಮಂಡಿಸದೇ ಇದ್ದರೆ, ಆಧ್ಯಾದೇಶ ಎಂದಿಗೂ ಕಾಯ್ದೆಯಾಗುವುದಿಲ್ಲ. ಅಧ್ಯಾದೇಶ ಮಂಡನೆಯಾಗಿಲ್ಲ.
ಆದುದರಿಂದ ಆಧ್ಯಾದೇಶ ಅನೂರ್ಜಿತಗೊಂಡಿದೆ ಹಾಗೂ ಆಯೋಗವನ್ನು ರದ್ದು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಂ.ಎಂ. ಕುಟ್ಟಿ ಈ ಆಯೋಗದ ಅಧ್ಯಕ್ಷರಾಗಿದ್ದರು.
Next Story





