ಆಗಸ್ಟ್ 1ರಂದು ನೀಟ್ ಪರೀಕ್ಷೆ

ಹೊಸದಿಲ್ಲಿ, ಮಾ. 13: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ಎನ್‌ಇಇಟಿ) ಯುಜಿ-2021 ಆಗಸ್ಟ್ 1ರಂದು ನಡೆಸಲಾಗುವುದು ಎಂದು ನ್ಯಾಷನಲ್ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶುಕ್ರವಾರ ಪ್ರಕಟಿಸಿದೆ. ‘‘ನೀಟ್ (ಯುಜಿ) 2021 ಹಿಂದಿ ಹಾಗೂ ಇಂಗ್ಲೀಷ್ ಸೇರಿದಂತೆ 11 ಭಾಷೆಗಳಲ್ಲಿ ಪೆನ್ ಹಾಗೂ ಪೇಪರ್ ಮಾದರಿಯಲ್ಲಿ ನಡೆಸಲಾಗುವುದು’’ ಎಂದು ಸಂಸ್ಥೆ ಹೊರಡಿಸಿದ ಅಧಿಸೂಚನೆ ಹೇಳಿದೆ.
ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಸರಕಾರ ಚಿಂತಿಸಿತ್ತು. ಆದರೆ, ಈ ವರ್ಷ ಪೆನ್ ಹಾಗೂ ಪೇಪರ್ ಮಾದರಿಯಲ್ಲಿ ನಡೆಸಲು ನಿರ್ಧರಿಸಿದೆ. ನೀಟ್ ಯುಜಿ ಎಂಬಿಬಿಎಸ್, ಬಿಎಎಂಎಸ್, ಬಿಯುಎಂಎಸ್ ಹಾಗೂ ಬಿಎಚ್‌ಎಂಎಸ್ ಸೇರಿದಂತೆ ವೈದ್ಯಕೀಯ ಹಾಗೂ ದಂತವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸುತ್ತದೆ. ರಾಜ್ಯ ಸರಕಾರದ ಇತರ ಸಂಸ್ಥೆಗಳು/ಕೇಂದ್ರ ಸರಕಾರದ ಕಾಲೇಜುಗಳಲ್ಲಿ ಬಿಎಸ್‌ಎಸ್ ನರ್ಸಿಂಗ್ ಹಾಗೂ ಬಿಎಸ್‌ಸಿ ಲೈಫ್ ಸಯನ್ಸಸ್ ಪ್ರವೇಶಕ್ಕೆ ಕೂಡ ನೀಟ್‌ನ ಫಲಿತಾಶವನ್ನು ಪರಿಗಣಿಸಲಾಗುತ್ತದೆ ಎಂದು ಎನ್‌ಟಿಎ ನೋಟಿಸ್ ಹೇಳಿದೆ.
ನೀಟ್ ಪರೀಕ್ಷೆಯನ್ನು ಪ್ರತಿ ವರ್ಷ ಎರಡು ಭಾರಿ ನಡೆಸಲಾಗುತ್ತದೆ. ಆದರೆ, ಈ ಬಾರಿ ಒಂದೇ ಬಾರಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ವರ್ಷ ಒಂದೇ ಬಾರಿ ನೀಟ್ ಪರೀಕ್ಷೆ ನಡೆಸವುದನ್ನು ಎನ್‌ಟಿಎಯ ಪ್ರಧಾನ ನಿರ್ದೇಶಕ ವಿನೀತ್ ಜೋಷಿ ಅವರು ದೃಢಪಡಿಸಿದ್ದಾರೆ.





