ಮಾ.24ಕ್ಕೆ ಬಿಡಿಎ ಕಚೇರಿಗೆ ಮುತ್ತಿಗೆ ಚಳವಳಿ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು, ಮಾ.13: ರಾಜ್ಯ ಸರಕಾರ ಈ ಕೂಡಲೇ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ರೈತರು, ನಿವೇಶನದಾರರು ಹಾಗೂ ನೊಂದ ಮನೆ ಮಾಲಕರು ಮಾ.24ರಂದು ಬಿಡಿಎ ಮುತ್ತಿಗೆ ಚಳವಳಿ ನಡೆಸಲಿದ್ದಾರೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಶನಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ನಡೆಯುವ ಪ್ರತಿಭಟನೆಯಲ್ಲಿ ಸುಮಾರು ಏಳೆಂಟು ಸಾವಿರ ಜನ ಪಾಲ್ಗೊಳ್ಳಲಿದ್ದು, ಬಿಡಿಎ ಕಚೇರಿ ಎದುರು ಪ್ರತಿಭಟಿಸಿ, ಶಿವರಾಮ ಕಾರಂತ ಬಡಾವಣೆ ಕೈಬಿಡಬೇಕೆಂದು ಆಗ್ರಹಿಸಲಾಗುವುದೆಂದು ಹೇಳಿದರು.
ಇದೇ ವೇಳೆ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಅವರು, ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿನ 2018ಕ್ಕೂ ಮುನ್ನ ಕಟ್ಟಲಾಗಿರುವ ಕಟ್ಟಡಗಳ ಕುರಿತ ಪರಿಶೀಲನೆಗೆ ಸುಪ್ರೀಂಕೋರ್ಟ್ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಯು ತಮಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಸಮಿತಿಯ ಪ್ರಯತ್ನಗಳಿಗೆ ಭಂಗ ಉಂಟು ಮಾಡುವ ಕೆಲಸ ಕೈಗೊಂಡು, ವದಂತಿಗಳನ್ನು ಹಬ್ಬಿಸುತ್ತಿದ್ದೀರಿ. 17 ಗ್ರಾಮಗಳಲ್ಲಿ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು, ಸಹಾಯ ಕೇಂದ್ರಗಳಿಗೆ ನಾಗರಿಕರು ಅಗತ್ಯ ಮಾಹಿತಿ ಸಲ್ಲಿಸಲು ಅಡ್ಡಿಪಡಿಸುತ್ತಿದ್ದೀರಿ ಎಂದು ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ತಾವು ಅಂತಹ ಯಾವುದೇ ಅಡ್ಡಿಪಡಿಸುವ ಕೆಲಸ ಮಾಡಿಲ್ಲ ಎಂದು ನುಡಿದರು.
ಸಮಿತಿಗೆ ಯಾವ ಯಾವ ದಾಖಲೆಗಳನ್ನು ನೀಡಬೇಕು ಎಂದು ಪರಿಶೀಲಿಸಿ ತಿಳಿಸುವುದಾಗಿ ಹೇಳಿದ್ದೆ. ಈ ಅಂಶವನ್ನು ಸಮಿತಿ ತಪ್ಪಾಗಿ ಅರ್ಥೈಸಿದ್ದು ನೋಟಿಸ್ ಜಾರಿ ಮಾಡಿದೆ. ಇದನ್ನು ಸಮಿತಿ ಮುಂದೆ ಹಾಜರಾಗಿ, ಮನದಟ್ಟು ಮಾಡಲಿರುವುದ್ದೇನೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಅಬ್ಬಿಗೆರೆರಾಜಣ್ಣ, ಕೃಷ್ಣಪ್ಪ, ಪಂಚಾಕ್ಷರಿ, ಶಂಕರ್, ರವೀಶ್ ಸೇರಿದಂತೆ ಪ್ರಮುಖರಿದ್ದರು.
ಬಿಡಿಎ ಅಧ್ಯಕ್ಷ ಎಚ್. ವಿಶ್ವನಾಥ್ ಅವರು ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಇದೇ ಬಡಾವಣೆ ಸಂತ್ರಸ್ತರ ದನಿಯಾಗಿದ್ದರು. ಪ್ರತಿಭಟನೆಯಲ್ಲಿ ಖುದ್ದು ಭಾಗವಹಿಸಿ, ಯಾವುದೇ ಹಂತದ ಹೋರಾಟದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಅದೇ ಯೋಜನೆ ಅನುಷ್ಠಾನಕ್ಕೆ ಉತ್ಸುಕರಾಗಿದ್ದಾರೆ. ಆದರೆ, ಅಧ್ಯಕ್ಷರ ಈ ನಡೆಯಿಂದ ಸಾವಿರಾರು ಜನರ ಸ್ಥಿತಿ ಅತಂತ್ರವಾಗಿದೆ. ಕೂಡಲೇ ಸರಕಾರದ ಮೇಲೆ ಒತ್ತಡ ತಂದು, ಯೋಜನೆ ಕೈಬಿಡಲು ಮನವೊಲಿಸಬೇಕು.
-ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ







