ಶೇ.50ರ ಮೀಸಲಾತಿ ಮಿತಿ ಹೆಚ್ಚಳ: ಸುಪ್ರೀಂಕೋರ್ಟ್ ಗೆ ರಾಜ್ಯದ ನಿಲುವು ತಿಳಿಸಲು ಪ್ರಮಾಣ ಪತ್ರ- ಬೊಮ್ಮಾಯಿ
‘ಎಸ್ಸಿ-ಎಸ್ಟಿ, ಒಬಿಸಿಗಳ ಹಿತರಕ್ಷಣೆ ಸರಕಾರ ಬದ್ಧ'

ಬೆಂಗಳೂರು, ಮಾ. 13: ‘ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ) ಹಾಗೂ ಇತರೆ ಹಿಂದುಳಿದ ವರ್ಗ(ಒಬಿಸಿ) ಹಿತರಕ್ಷಣೆ ಮತ್ತು ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಸರಕಾರ ಬದ್ಧ. ಮೀಸಲಾತಿ ಪ್ರಮಾಣ ಶೇ.50ರ ಗರಿಷ್ಠ ಮಿತಿಗಿಂತಲೂ ಹೆಚ್ಚಿಸುವ ಸಂಬಂಧ ರಾಜ್ಯ ಸರಕಾರ ಮಾ.23ಕ್ಕೆ ಸುಪ್ರೀಂ ಕೋರ್ಟ್ ಗೆ ತನ್ನ ನಿಲುವು ತಿಳಿಸಲಿದೆ' ಎಂದು ಗೃಹ ಹಾಗೂ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶನಿವಾರ ನಗರದ ಕುಮಾರಕೃಪಾ ಅತಿಥಿ ತನ್ನ ಅಧ್ಯಕ್ಷತೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ರಾಜ್ಯ ಸರಕಾರದ ಅಡ್ವಕೇಟ್ ಜನರಲ್ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಮಾಜಿ ಅಡ್ವಕೇಟ್ ಜನರಲ್‍ಗಳಾದ ಉದಯ್ ಹೊಳ್ಳ, ಪ್ರೊ. ರವಿವರ್ಮ ಕುಮಾರ್, ಜಸ್ಟೀಸ್ ಕೆ.ಎಲ್.ಮಂಜುನಾಥ್, ಮಧುಸೂದನ್ ನಾಯಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಸೇರಿದಂತೆ ಕಾನೂನು ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ಲಿಂಗಾಯತ ಪಂಚಮಸಾಲಿ 2ಎ ಸೇರ್ಪಡೆ, ಕುರುಬ ಸಮುದಾಯ ಎಸ್ಟಿ ಸೇರ್ಪಡೆ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಹೋರಾಟ ನಡೆಸಿದ್ದು, ಆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸಾಂವಿಧಾನಿಕ ತೊಡಕುಗಳ ನಿವಾರಣೆಗೆ ಸಂಬಂಧ ಅತ್ಯಂತ ಮಹತ್ವದ ಸಭೆ ನಡೆಸಲಾಗಿದೆ ಎಂದರು.
ಮಹಾರಾಷ್ಟ್ರ ಸರಕಾರದ ಶೇ.50ರ ಪ್ರಮಾಣ ಮಿತಿಯನ್ನು ಮೀರಿ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ ಆರು ಪ್ರಶ್ನೆಗಳನ್ನು ರಾಜ್ಯ ಸರಕಾರಗಳಿಗೆ ಕೇಳಿದೆ. ಆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ರಾಜ್ಯದ ನಿಲುವು ತಿಳಿಸಲು ‘ಪ್ರಮಾಣ ಪತ್ರ' ಸಲ್ಲಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಅವರು ಹೇಳಿದರು.
ಸಾಂವಿಧಾನಿಕ ಹಾಗೂ ಕಾನೂನು ಚೌಕಟ್ಟಿನಲ್ಲಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲಾಗುವುದು. ಕರ್ನಾಟಕ ಮೀಸಲಾತಿ ವಿಚಾರದಲ್ಲಿ ಪ್ರಗತಿಪರ ರಾಜ್ಯ ಸ್ವಾತಂತ್ರ್ಯ ಪೂರ್ವದ ರಾಜರ ಕಾಲದಲ್ಲೇ ಇಲ್ಲಿ ಮೀಸಲಾತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಡಲ್ ಆಯೋಗದ ವರದಿಗೂ ಮೊದಲೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲಾಗಿತ್ತು ಎಂದು ಬಸವರಾಜ ಬೊಮ್ಮಾಯಿ ಸ್ಮರಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಅಡ್ವಕೇಟ್ ಜನರಲ್ ಹಾಗೂ ಮಾಜಿ ಅಡ್ವಕೇಟ್ ಜನರಲ್‍ಗಳು ಸೇರಿದಂತೆ ಕಾನೂನು ತಜ್ಞರು ಸಲಹೆ-ಸೂಚನೆಗಳನ್ನು ನೀಡಿದ್ದು, ಕೆಲವರು ಲಿಖಿತ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಆಧರಿಸಿ ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಕೆ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಸ್ತೃತವಾಗಿ ಚರ್ಚೆ ಮಾಡಿದ್ದೇವೆ
ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50 ನ್ನು ಮೀರಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ, ಕೆಲ ತಿದ್ದುಪಡಿಗಳಿಂದಾಗಿ ಈ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆ. ಈ ಅಧಿಕಾರವನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದು ಸೇರಿದಂತೆ ಹಲವು ಮಹತ್ವದ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಕೇಳಿದೆ. ಈ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ಮಾಡಿದ್ದೇವೆ. ತಜ್ಞರ ಅಭಿಪ್ರಾಯಗಳನ್ನು ದಾಖಲಿಸಿದ್ದೇವೆ'
-ಬಸವರಾಜ ಬೊಮ್ಮಾಯಿ, ಕಾನೂನು ಸಚಿವ







