ಉತ್ತರಾಖಂಡ: 11 ಸಚಿವರಿಂದ ಪ್ರಮಾಣವಚನ ಸ್ವೀಕಾರ
ಡೆಹ್ರಾಡೂನ್, ಮಾ.13: ಉತ್ತರಾಖಂಡದಲ್ಲಿ ತೀರಥ್‌ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ದಿನದ ಬಳಿಕ ಶನಿವಾರ 11 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಈ ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಂಪುಟದಲ್ಲಿದ್ದ 7 ಸಚಿವರಿಗೆ ನೂತನ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಈ ಹಿಂದಿನ ಸಚಿವ ಸಂಪುಟದಲ್ಲಿದ್ದ ಮತ್ತೊಬ್ಬ ಸಚಿವ ಮದನ್ ಕೌಶಿಕ್‌ರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಉಳಿದ ನಾಲ್ವರು ಹೊಸ ಮುಖಗಳಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ‘ಈ ಹಿಂದಿನ ಸಂಪುಟದಲ್ಲಿದ್ದ ಯಾರನ್ನೂ ಕೈಬಿಟ್ಟಿಲ್ಲ. ಹೊಸ ಸಂಪುಟದಲ್ಲಿ ಕಾಂಗ್ರೆಸ್ ಹಿನ್ನೆಲೆಯ ಎಲ್ಲಾ ಸಚಿವರಿಗೆ ಸ್ಥಾನ ದೊರಕಿರುವುದು ಆಡಳಿತ ವಿರೋಧಿ ಅಲೆಗೆ ಈ ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರೇ ಜವಾಬ್ದಾರರು ಎಂಬ ಸಂದೇಶವನ್ನು ರವಾನಿಸಿದೆ’ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.





