ಹೊಸ ವರ್ಷದಲ್ಲಿ ಕೊರೋನ ಸೋಂಕಿನ ಅತ್ಯಧಿಕ 24.882 ಪ್ರಕರಣಗಳು ವರದಿ
ಹೊಸದಿಲ್ಲಿ, ಮಾ. 13: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 24,882 ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದು ಈ ವರ್ಷ ಒಂದು ದಿನ ದಾಖಲಾದ ಅತಿ ಹೆಚ್ಚು ಹೊಸ ಕೊರೋನ ಸೋಂಕಿನ ಪ್ರಕರಣಗಳು. ಇದರೊಂದಿಗೆ ಒಟ್ಟು ಕೊರೋನ ಸೊಂಕಿನ ಪ್ರಕರಣಗಳ ಸಂಖ್ಯೆ 1.13 ಕೋಟಿಗೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ದತ್ತಾಂಶ ಹೇಳಿದೆ. ದೇಶದಲ್ಲಿ ಶುಕ್ರವಾರ 23,285 ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿತ್ತು.
ನಿನ್ನೆ ವರದಿಯಾದ ಹೊಸ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಗಿಂತ ಶೇ. 7ರಷ್ಟು ಹೆಚ್ಚು ಇಂದು ವರದಿಯಾಗಿದೆ. ವರ್ಷಗಳ ಹಿಂದೆ ಕೊರೋನ ಸೋಂಕು ಹರಡಲು ಆರಂಭಿಸಿದ ಬಳಿಕ ಇದುವರೆಗೆ 1,13,33,728 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ಸರಕಾರದ ದತ್ತಾಂಶ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನಿಂದ 140 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಇದರೊಂದಿಗೆ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,58,446ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೊರೋನ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,02,022ಕ್ಕೆ ಏರಿಕೆಯಾಗಿದೆ. ಇದು ಒಟ್ಟು ಸೋಂಕಿನ 1.74 ಶೇಕಡ ಆಗಿದೆ. ಕೊರೋನ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 96.82ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಡಿಸೆಂಬರ್ 20ರ ನಂತರ ಕೊರೋನ ಸೋಂಕಿನ ಅತ್ಯಧಿಕ ಪ್ರಕರಣಗಳು ಇಂದು ವರದಿಯಾಗಿದೆ. ಅಂದು 26,624 ಹೊಸ ಪ್ರಕರಣಗಳು ದಾಖಲಾಗಿತ್ತು.
ಕೊರೋನ ಸೋಂಕಿನ ಹೊಸ ಪ್ರಕರಣಗಳಲ್ಲಿ ಶೇ. 82.96ರಷ್ಟು ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ಹಾಗೂ ತಮಿಳುನಾಡಿನಿಂದ ವರದಿಯಾಗಿದೆ ಎಂದು ಸರಕಾರ ಶುಕ್ರವಾರ ಹೇಳಿದೆ. ಮಹಾರಾಷ್ಟ್ರದಲ್ಲಿ ಕಳೆದ ಒಂದು ವರ್ಷದಿಂದ ಅತ್ಯಧಿಕ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.





