ಜೆಡಿಎಸ್ ನಲ್ಲಿ ಇರುವವರೆಗೂ ಜಿ.ಟಿ.ದೇವೇಗೌಡರನ್ನು ಪಕ್ಷಕ್ಕೆ ಸೇರಿಸುವುದಿಲ್ಲ: ಕುಮಾರಸ್ವಾಮಿ

ಮೈಸೂರು,ಮಾ.13: ನಾನು ರಾಜ್ಯ ರಾಜಕಾರಣದಲ್ಲಿ ಮತ್ತು ಜೆಡಿಎಸ್ ಪಕ್ಷದಲ್ಲಿ ಇರುವವರೆಗೂ ಶಾಸಕ ಜಿ.ಟಿ.ದೇವೇಗೌಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.
ಮೈಮುಲ್ ಚುನಾವಣೆ ಸಂಬಂಧ ಹುಣಸೂರಿಗೆ ಭೇಟಿ ನೀಡಿದ ಅವರು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಯನ್ನು ಸೋಲಿಸಿದವರನ್ನೇ ಮುಖ್ಯಮಂತ್ರಿ ಮಾಡಬೇಕಿತ್ತು. ನಾವು ತಪ್ಪು ಮಾಡಿದ್ದೇವೆ ಎಂದು ಶಾಸಕ ಜಿ.ಟಿ.ದೇವೇಗೌಡ ಕುರಿತು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮುಖ್ಯಮಂತ್ರಿ (ಸಿದ್ದರಾಮಯ್ಯ)ಯನ್ನು ಸೋಲಿಸಿ ಬಂದಾಗ ಅವರು ಮೊದಲೇ ಕೇಳಿದ್ದರೆ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಡಬಹುದಿತ್ತು. ಕಾಯಿಲೆಗೆ ಔಷಧಿ ಕೊಡಬಹುದು. ಆದರೆ ನಟನೆ ಮಾಡಿದ್ದಾರೆ, ಅದಕ್ಕೆ ಹೇಗೆ ಔಷಧಿ ಕೊಡುವುದು ಎಂದು ಕುಟುಕಿದರು.
ರಾಜ್ಯ ರಾಜಕಾರಣದಲ್ಲಿ ನಾನು ಪಕ್ಷದಲ್ಲಿ ಇರುವವರೆಗೂ ಅಂತಹ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮಾತೇ ಇಲ್ಲ. ಪಕ್ಷದ ಚಿಹ್ನೆಯಿಂದ ಚುನಾವಣೆಗೆ ನಿಂತರು. ನನ್ನ ಕ್ಯಾಬಿನೆಟ್‍ನಲ್ಲಿ ಮಂತ್ರಿಯಾಗಿದ್ದರು. ಸರ್ಕಾರ ಹೋದ ಮೇಲೆ ಅವರೇ ಸಾರ್ವಜನಿಕವಾಗಿ ನನ್ನ ತೀರ್ಮಾನ ಅಂತ ಹೇಳಿದ್ದಾರೆ. ಅಂತಹ ವ್ಯಕ್ತಿಗಳು ನಮ್ಮ ಪಕ್ಷಕ್ಕೆ ಮತ್ತೆ ಬರುವುದು ಬೇಡ ಎಂದು ಕಿಡಿಕಾರಿದರು.
ಅಪ್ಪ ಮಗನಿಗೆ ಪಕ್ಷದ ಅನಿವಾರ್ಯವಿಲ್ಲ. 18 ತಿಂಗಳಿನಿಂದ ನಾನು ಅವರನ್ನು ಭೇಟಿ ಮಾಡಿಲ್ಲ. ಅವರು ನನ್ನನ್ನು ಭೇಟಿ ಮಾಡಿಲ್ಲ. ಆ ವ್ಯಕ್ತಿಯ ನಡವಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ನುಡಿದರು. ಪಕ್ಷದಲ್ಲೇ ಇದ್ದು ಪಕ್ಷದ ವಿರುದ್ಧ ಕೆಲಸ ಮಾಡುವ ನಾಯಕರನ್ನು ನಾವು ದೂರ ಇಡುತ್ತೇವೆ. ನಿಷ್ಠಾವಂತ ಕಾರ್ಯಕರ್ತರನ್ನು ಬೆಳೆಸುತ್ತೇವೆ ಎಂದು ಹೇಳಿದರು.
ಇನ್ನು ಪಿರಿಯಾಪಟ್ಟಣ ಕ್ಷೇತ್ರದ ನಮ್ಮ ಶಾಸಕ ಕೆ.ಮಹದೇವು ಅವರು ಮೈಮುಲ್ ಚುನಾವಣೆಯಲ್ಲಿ ಗೊಂದಲದಲ್ಲಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.







