ಸುಪ್ರೀಂಕೋರ್ಟ್ನಲ್ಲಿ ಏಕೈಕ ಮಹಿಳಾ ನ್ಯಾಯಮೂರ್ತಿ!

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (PTI photo)
ಹೊಸದಿಲ್ಲಿ, ಮಾ.14: ಭಾರತದ ಸುಪ್ರೀಂ ಕೋರ್ಟ್ನಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಒಂದಕ್ಕೆ ಇಳಿದಿರುವುದು ಆತಂಕಕಾರಿ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಪ್ರಾಮಾಣಿಕವಾಗಿ ಗಂಭೀರ ಆತ್ಮಾವಲೋಕ ನಡೆಸಿಕೊಳ್ಳುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಸುಪ್ರೀಂಕೋಟ್ನ ಯುವ ವಕೀಲರ ವೇದಿಕೆಯ ವತಿಯಿಂದ ನ್ಯಾಯಮೂರ್ತಿ ಶನಿವಾರ ಮಲ್ಹೋತ್ರಾ ಅವರ ಗೌರವಾರ್ಥ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸುಪ್ರೀಂಕೋರ್ಟ್ಗೆ ನೇರವಾಗಿ ನೇಮಕಗೊಂಡ ಮೊಟ್ಟಮೊದಲ ಮಹಿಳಾ ವಕೀಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು ಶನಿವಾರ ಸೇವೆಯಿಂದ ನಿವೃತ್ತರಾದರು.
"ನ್ಯಾಯಮೂರ್ತಿ ಮಲ್ಹೋತ್ರಾ ನಿವೃತ್ತಿಯಾಗಿರುವುದರಿಂದ ಸುಪ್ರೀಂಕೋರ್ಟ್ನಲ್ಲಿ ಒಬ್ಬರು ಮಾತ್ರ ಮಹಿಳಾ ನ್ಯಾಯಮೂರ್ತಿ ಉಳಿದಂತಾಗಿದೆ. ಸಂಸ್ಥೆಯಾಗಿ ಇದು ತೀರಾ ಆತಂಕಕಾರಿ ಬೆಳವಣಿಗೆ ಎನ್ನುವುದು ನನ್ನ ಅಭಿಪ್ರಾಯ. ಈ ಬಗ್ಗೆ ಗಂಭೀರ ಹಾಗೂ ಪ್ರಾಮಾಣಿಕ ಅವಲೋಕನ ನಡೆಯಬೇಕು" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
"ಪ್ರತಿಯೊಬ್ಬ ಭಾರತೀಯರ ಜೀವನದ ಮೇಲೆ ಪರಿಣಾಮ ಬೀರುವ ಸಂಸ್ಥೆಯ ಸ್ಥಿತಿಯನ್ನು ಉತ್ತಮಪಡಿಸುವ ಅಗತ್ಯವಿದೆ" ಎಂದು ತಿಳಿಸಿದರು. ದೇಶದ ವೈವಿಧ್ಯತೆ ನಮ್ಮ ನ್ಯಾಯ ವ್ಯವಸ್ಥೆಯಲ್ಲೂ ಪ್ರತಿಫಲನಗೊಳ್ಳಬೇಕು ಎಂದರು.







