ಅಂಬಾನಿ ಭದ್ರತಾ ಲೋಪ: ಎನ್ಐಎಯಿಂದ ಮುಂಬೈ ಪೊಲೀಸ್ ಅಧಿಕಾರಿಯ ಬಂಧನ

Photo: PTI
ಮುಂಬೈ, ಮಾ.14: ದಕ್ಷಿಣ ಮುಂಬೈನಲ್ಲಿರುವ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾದ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶನಿವಾರ ರಾತ್ರಿ 12 ಗಂಟೆಗಳ ಸತತ ವಿಚಾರಣೆ ಬಳಿಕ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝ್ ಎಂಬವರನ್ನು ಬಂಧಿಸಿದೆ.
ಸಚಿನ್ ತಮ್ಮ ಹೇಳಿಕೆ ದಾಖಲಿಸಲು ಪೂರ್ವಾಹ್ನ 11:30ರ ಸುಮಾರಿಗೆ ದಕ್ಷಿಣ ಮುಂಬೈನ ಕುಂಬಲ್ಲಾ ಹಿಲ್ನಲ್ಲಿರುವ ಎನ್ಐಎ ಕಚೇರಿಗೆ ತೆರಳಿದ್ದರು. "ಸಚಿನ್ ವಾಝ್ ಅವರನ್ನು ಎನ್ಐಎ ಪ್ರಕರಣ ಆರ್ಸಿ/1/2021/ಎನ್ಐಎ/ಎಂಯುಎಂಗೆ ಸಂಬಂಧಿಸಿದಂತೆ ರಾತ್ರಿ 11:30ಕ್ಕೆ ಬಂಧಿಸಲಾಗಿದೆ" ಎಂದು ಎನ್ಐಎ ವಕ್ತಾರ ಪ್ರಕಟಿಸಿದ್ದಾರೆ.
ಕರ್ಮಿಚಾಳ್ ರಸ್ತೆಯ ಅಂಬಾನಿ ನಿವಾಸದ ಬಳಿ ಫೆಬ್ರವರಿ 25ರಂದು ಜಿಲೆಟಿನ್ ತುಂಬಿದ್ದ ಸ್ಕಾರ್ಪಿಯೊ ವಾಹನ ಪತ್ತೆಯಾಗಿತ್ತು. ಎನ್ಕೌಂಟರ್ ಸ್ಪೆಶಲಿಸ್ಟ್ ಎಂದೇ ಕರೆಸಿಕೊಂಡಿರುವ ವಾಝ್ ಇದೀಗ ವಾಹನದ ಮಾಲಕ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರಾನ್ ಅವರನ್ನು ಹತ್ಯೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಮಾರ್ಚ್ 5ರಂದು ಹಿರಾನ್ ಮೃತದೇಹ ಥಾಣೆ ಜಿಲ್ಲೆಯಲ್ಲಿ ಕಂದಕದಲ್ಲಿ ಪತ್ತೆಯಾಗಿತ್ತು. ಹಿರಾನ್ ಹತ್ಯೆ ಪ್ರಕರಣದ ಬಗ್ಗೆ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್) ತನಿಖೆ ನಡೆಸುತ್ತಿದೆ. ಹಿರಾನ್ ಮೃತದೇಹ ಪತ್ತೆಯಾದ ಬಳಿಕ ಹತ್ಯೆ ಪ್ರಕರಣ ದಾಖಲಿಸಿಕೊಂಡಿತ್ತು.







